ನವದೆಹಲಿ: ಯುಎಇಯಲ್ಲಿ ಕಳೆದ ವರ್ಷ ನಡೆದ ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯಿಂದ ಗಮನ ಸೆಳೆದಿದ್ದ ಹರಿಯಾಣದ ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರ ನಿಶ್ಚಿತಾರ್ಥ ಬುಧವಾರ ನೆರವೇರಿದೆ.
‘3.2.2021’ ಎಂದಷ್ಟೇ ಬರೆದು ಉಂಗುರ ಮತ್ತು ಹೃದಯದ ಇಮೋಜಿಯನ್ನು ಪ್ರಕಟಿಸುವ ಮೂಲಕ ರಾಹುಲ್ ತೆವಾಟಿಯಾ ನಿಶ್ಚಿತಾರ್ಥವನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಜತೆಗೆ, ರಿಧಿ ಪನ್ನು ಜತೆಗಿನ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನೂ ರಾಹುಲ್ ತೆವಾಟಿಯಾ ಟ್ವೀಟಿಸಿದ್ದಾರೆ.
27 ವರ್ಷದ ರಾಹುಲ್ ತೆವಾಟಿಯಾ ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ಪರ 14 ಪಂದ್ಯ ಆಡಿ 10 ವಿಕೆಟ್ ಕಬಳಿಸಿದ್ದರು ಮತ್ತು 255 ರನ್ ಸಿಡಿಸಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವೊಂದರಲ್ಲಿ ರಾಹುಲ್ ತೆವಾಟಿಯಾ ಓವರ್ ಒಂದರಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಡುವ ಮೂಲಕ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ: ಟೀಮ್ ಇಂಡಿಯಾದ ಸಭೆಯಲ್ಲಿ ರೈತರ ಬಗ್ಗೆ ಚರ್ಚೆ!
ತೆವಾಟಿಯಾ ನಿಶ್ಚಿತಾರ್ಥದ ಬಗ್ಗೆ ಟ್ವೀಟ್ ಮಾಡಿದ ಬೆನ್ನಲ್ಲೇ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿನಂದನೆ ತಿಳಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆಯಲ್ಲೂ ಅಭಿನಂದನೆ ಸಲ್ಲಿಸಲಾಗಿದೆ.
ದೇಶೀಯ ಕ್ರಿಕೆಟ್ ಪುನರಾರಂಭ ಕಂಡಿರುವ ನಡುವೆ ಇದೀಗ ಕ್ರಿಕೆಟಿಗರು ಒಬ್ಬೊಬ್ಬರಾಗಿಯೇ ಜೀವನದ ಹೊಸ ಇನಿಂಗ್ಸ್ ಆರಂಭಿಸುತ್ತಿರುವುದು ವಿಶೇಷವಾಗಿದೆ. ಇತ್ತೀಚೆಗಷ್ಟೇ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ವಿವಾಹವಾಗಿದ್ದರು. ಸೌರಾಷ್ಟ್ರ ತಂಡದ ನಾಯಕ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ರಾಹುಲ್ ತೆವಾಟಿಯಾರ ಸಹ ಆಟಗಾರರಾಗಿರುವ ಜೈದೇವ್ ಉನಾದ್ಕತ್ ಕೂಡ ಮಂಗಳವಾರವಷ್ಟೇ ವಿವಾಹವಾಗಿದ್ದರು.