Rajasthan Royals : ಪ್ರಸ್ತುತ ನಡೆಯುತ್ತಿರುವ 18ನೇ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ. ಇಲ್ಲಿಯವರೆಗೆ, ಎಂಟು ಪಂದ್ಯಗಳನ್ನು ಆಡಿರುವ ರಾಜಸ್ಥಾನ, ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿದೆ. 6 ಪಂದ್ಯಗಳನ್ನು ಹೀನಾಯವವಾಗಿ ಸೋತಿದ್ದು, ತಂಡದ ಖಾತೆಯಲ್ಲಿ 4 ಅಂಕಗಳು ಮಾತ್ರ ಇವೆ. ತನ್ನು ತಂಡದ ನೆಟ್ ರನ್ರೇಟ್ (-0.633) ಕೂಡ ತುಂಬಾ ಕಡಿಮೆ ಇದೆ.
ಅಂಕಪಟ್ಟಿಯಲ್ಲಿ ರಾಜಸ್ಥಾನ ತಂಡ ಇನ್ನೂ ಎಂಟನೇ ಸ್ಥಾನದಲ್ಲಿಯೇ ಇದೆ. ತಂಡದ ಪ್ಲೇಆಫ್ ಪ್ರವೇಶ ಸದ್ಯಕ್ಕೆ ಜಟಿಲವಾಗಿದೆ. ಇನ್ನು ಮುಂದೆ ಅವರು ಆಡುವ ಎಲ್ಲ ಪಂದ್ಯಗಳನ್ನು ಗೆದ್ದರೂ, ತಂಡವು ಖಂಡಿತವಾಗಿಯೂ ಪ್ಲೇಆಫ್ ತಲುಪುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೂ, ಆಸೆ ಮಾತ್ರ ಇನ್ನೂ ಜೀವಂತವಾಗಿಯೇ ಇದೆ.
ಸದ್ಯ ಭಾರಿ ಸಂಕಷ್ಟದ ಸ್ಥಿತಿಯಲ್ಲಿರುವ ರಾಜಸ್ಥಾನ ತಂಡ ಗುರುವಾರ (ಏಪ್ರಿಲ್ 24) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ರಾಜಸ್ಥಾನಕ್ಕೆ ಭಾರಿ ಆಘಾತ ಎದುರಾಗಿದೆ. ಅದೇನೆಂದರೆ, ನಾಯಕ ಸಂಜು ಸ್ಯಾಮ್ಸನ್ ಆರ್‌ಸಿಬಿ ವಿರುದ್ಧ ಆಡುವುದಿಲ್ಲ. ಆದರೆ, ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ರಾಜಸ್ಥಾನ ಗೆಲ್ಲಲೇಬೇಕಿದೆ.
ಸಂಜು ಸ್ಯಾಮ್ಸನ್ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ. ಅವರು ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದಾರೆ. ಚೇತರಿಸಿಕೊಳ್ಳಲು ಇನ್ನೂ ಒಂದು ವಾರ ಬೇಕಾಗಬಹುದು ಎಂದು ತೋರುತ್ತದೆ. ಪ್ರಸ್ತುತ ಸಂಜು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಜಸ್ಥಾನದ ಆಡಳಿತ ಮಂಡಳಿ ಹೇಳಿಕೆ ನೀಡಿದೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಸಂಜು ಆಡುವುದಿಲ್ಲ. ಅಲ್ಲದೆ, ತಂಡದೊಂದಿಗೆ ಬೆಂಗಳೂರಿಗೂ ಸಹ ಪ್ರಯಾಣಿಸಿಲ್ಲ. ಅವರು ಜೈಪುರದಲ್ಲಿಯೇ ಉಳಿದುಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಹೊರಗುಳಿದ ಕಾರಣ, ರಿಯಾನ್ ಪರಾಗ್ ಅವರನ್ನು RR ನಾಯಕನನ್ನಾಗಿ ನೇಮಿಸಲಾಗುತ್ತದೆ. ದೆಹಲಿ ವಿರುದ್ಧದ ಸೂಪರ್ ಓವರ್ ಪಂದ್ಯದಲ್ಲಿ ಸಂಜು ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದರು. ನಂತರ ಅವರು ಲಖನೌ ಪಂದ್ಯವನ್ನು ತಪ್ಪಿಸಿಕೊಂಡರು. ಇದೀಗ RCB ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದಾರೆ. (ಏಜೆನ್ಸೀಸ್)