ನವದೆಹಲಿ: ಭಾರತದ ಪಂದ್ಯವಿರುವಾಗ ಅದೆಷ್ಟೋ ಮಕ್ಕಳು ಶಾಲೆಗಳಿಗೆ ಚಕ್ಕರ್ ಹಾಕುವುದು ಸಾಮಾನ್ಯ. ಅದರಲ್ಲೂ ದಿಗ್ಗಜ ಸಚಿನ್ ತೆಂಡುಲ್ಕರ್ ಆಡುತ್ತಿದ್ದ ಕಾಲದಲ್ಲಿ ಇದು ಸ್ವಲ್ಪ ಜಾಸ್ತಿಯೇ ಆಗಿತ್ತು. ಅಂದು ಸಚಿನ್ ಬ್ಯಾಟಿಂಗ್ ನೋಡುವ ಸಲುವಾಗಿ ಶಾಲೆಗೆ ಚಕ್ಕರ್ ಹಾಕುತ್ತಿದ್ದ ಹುಡುಗ ಮುಂದೊಂದು ದಿನ ಸಚಿನ್ ಜತೆಯೇ ರಾಷ್ಟ್ರೀಯ ತಂಡದ ಪರ ಆಡಿದ. 1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ಎದುರಿನ ಕೋಕಾ ಕೋಲಾ ಟ್ರೋಫಿ ಪಂದ್ಯ ನೋಡುವ ಸಲುವಾಗಿ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಶಾಲೆ ಬಂಕ್ ಮಾಡಿದ್ದರಂತೆ.
ಇದನ್ನೂ ಓದಿ: ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !
ಉತ್ತರ ಪ್ರದೇಶದ ಮುರಾದ್‌ನಗರದ ಶಾಲೆಯಲ್ಲಿ ಓದುತ್ತಿದ್ದಾಗ ಸಹಪಾಠಿಯೊಬ್ಬ ಸಚಿನ್ ಬ್ಯಾಟಿಂಗ್ ನೋಡೋಣ ಎಂದಾಗ ರೈನಾ ಮರು ಮಾತನಾಡದೆ ಶಾಲೆಯಿಂದ ಎದ್ದು ಹೋಗಿದ್ದರಂತೆ. ಶಾಲೆಯಲ್ಲಿ ಸೋನು ಎಂದು ಕರೆಸಿಕೊಳ್ಳುತ್ತಿದ್ದ 12 ವರ್ಷದ ರೈನಾ, ಬ್ಲಾಕ್ ಅಂಡ್ ವೈಡ್ ಟೀವಿಯಲ್ಲಿ ಪಂದ್ಯ ವೀಕ್ಷಿಸಿದ್ದು ಇನ್ನು ಕಣ್ಮುಂದಿದೆ ಎಂದು ಮೆಲುಕು ಹಾಕುತ್ತಾರೆ.
ಸಚಿನ್ ಅಂದಿನ ಪಂದ್ಯದಲ್ಲಿ 131 ಎಸೆತಗಳಲ್ಲಿ 143 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ 26 ರನ್‌ಗಳಿಂದ ಸೋತರೂ ಡಿಕ್‌ವರ್ತ್ ಲೂಯಿಸ್ ನಿಯಮದನ್ವಯ ಭಾರತ ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಸಚಿನ್ 131 ಎಸೆತಗಳಲ್ಲಿ 134 ರನ್ ಸಿಡಿಸಿದ್ದರು. ಭಾರತ 6 ವಿಕೆಟ್‌ಗಳಿಂದ ಆಸೀಸ್ ತಂಡವನ್ನು ಟ್ರೋಫಿ ಗೆದ್ದುಕೊಂಡಿತ್ತು.
ಇದಾದ 7 ವರ್ಷಗಳ ಬಳಿಕ ಸಚಿನ್ ತೆಂಡುಲ್ಕರ್ ಜತೆಗೆ ಸುರೇಶ್ ರೈನಾ ಡ್ರೆಸಿಂಗ್ ರೂಂ ಹಂಚಿಕೊಂಡಿದ್ದು ಇತಿಹಾಸ. 2005ರಲ್ಲಿ ರೈನಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಬಳಿಕ 2010ರಲ್ಲಿ ಟೆಸ್ಟ್ ತಂಡದಲ್ಲೂ ಸ್ಥಾನಗಿಟ್ಟಿಸಿಕೊಂಡರು. ಸಚಿನ್, ರಾಹುಲ್ ಭಾಯ್, ಲಕ್ಷ್ಮಣ್ ಸರ್ ಬ್ಯಾಟಿಂಗ್ ನೋಡುತ್ತಾ ಬೆಳೆದ ನಾನು ಅವರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಆಡಿದ್ದು ನನ್ನ ಅದೃಷ್ಟ ಎಂದು ಹೇಳಿಕೊಳ್ಳುತ್ತಾರೆ.