ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಸೂಪರ್​-8 ಹಂತದ ಪಂದ್ಯಗಳಿಗೂ ಕಾಡುತ್ತಿದೆ ಮಳೆ ಭೀತಿ!

ನಾರ್ತ್​ಸೌಂಡ್​: ಹಾಲಿ ಟಿ20 ವಿಶ್ವಕಪ್​ನಲ್ಲಿ ಮಳೆ ದೊಡ್ಡಮಟ್ಟದ ಪರಿಣಾಮವನ್ನು ಬೀರಿದೆ. ಶ್ರೀಲಂಕಾ, ಪಾಕಿಸ್ತಾನ ತಂಡಗಳು ಲೀಗ್​ ಹಂತದಲ್ಲೇ ಹೊರಬೀಳಲು ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ ಹೊರಬೀಳುವ ಭೀತಿ ಎದುರಿಸಲು ಮಳೆ ಪ್ರಮುಖ ಕಾರಣವೆನಿಸಿದೆ. ಇದರ ನಡುವೆ ಟೂರ್ನಿಯ ಮುಂದಿನ ಸೂಪರ್​-8 ಹಂತದಲ್ಲೂ ಮಳೆ ಅಡಚಣೆ ತರುವ ಭೀತಿ ಇದೆ. ಮೊದಲ ಸುತ್ತಿನಲ್ಲಿ ಅಮೆರಿಕದಲ್ಲೇ ಹೆಚ್ಚಿನ ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಸೂಪರ್​-8 ಹಂತದಿಂದ ಎಲ್ಲ ಪಂದ್ಯಗಳಿಗೆ ವೆಸ್ಟ್​ ಇಂಡೀಸ್​ ಆತಿಥ್ಯ ವಹಿಸಲಿದೆ. ಆದರೆ ಇದೀಗ ವಿಂಡೀಸ್​ನಲ್ಲೂ ಮಳೆ ಭೀತಿ ಹೆಚ್ಚಾಗಿದೆ.

ಕೆಲ ಪಂದ್ಯ ಸಂಪೂರ್ಣ ರದ್ದಾಗದಿದ್ದರೂ, ಮಳೆಯಿಂದಾಗಿ ಆಗಾಗ ಅಡಚಣೆ ಎದುರಿಸುವ, ಓವರ್​ ಕಡಿತಗೊಳ್ಳುವ ಮತ್ತು ಡಕ್ವರ್ತ್​-ಲೂಯಿಸ್​ ನಿಯಮದನ್ವಯ ಲಿತಾಂಶ ನಿರ್ಧಾರವಾಗುವ ಭೀತಿ ಇದ್ದೇ ಇದೆ.

ಜೂನ್​ 19ರಂದು ನಾರ್ತ್​ಸೌಂಡ್​ನಲ್ಲಿ ನಡೆಯಲಿರುವ ಅಮೆರಿಕ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದೊಂದಿಗೆ ಸೂಪರ್​-8 ಹಂತದ ಹಣಾಹಣಿ ಶುರುವಾಗಲಿವೆ. ಗ್ರಾಸ್​ ಐಲೆಟ್​, ಬ್ರಿಜ್​ಟೌನ್​, ಸೇಂಟ್​ ವಿನ್ಸೆಂಟ್​ನಲ್ಲಿ ಸೂಪರ್​-8ನ ಇತರ ಪಂದ್ಯಗಳು ನಿಗದಿಯಾಗಿವೆ. ಈ ಪೈಕಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆ ಭೀತಿ ಇದೆ. ಜೂನ್​ 24ರಂದು ಗ್ರಾಸ್​ ಐಲೆಟ್​ನಲ್ಲಿ ನಿಗದಿಯಾಗಿರುವ ಭಾರತ-ಆಸೀಸ್​ ನಡುವಿನ ಪ್ರಮುಖ ಪಂದ್ಯವೂ ಮಳೆಯಿಂದ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಹೀಗಾಗಿ ಸೆಮಿಫೈನಲ್​ಗೇರುವ ತಂಡಗಳನ್ನು ನಿರ್ಧರಿಸುವಲ್ಲೂ ಮಳೆ ಪ್ರಮುಖ ಪಾತ್ರ ನಿರ್ವಹಿಸಿದರೆ ಅಚ್ಚರಿ ಇಲ್ಲವೆನಿಸಿದೆ. ಜೂನ್​ 29ರಂದು ಬ್ರಿಜ್​ಟೌನ್​ನಲ್ಲಿ ನಿಗದಿಯಾಗಿರುವ ಫೈನಲ್​ ಪಂದ್ಯವೂ ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಆದರೆ ಈ ಪಂದ್ಯಕ್ಕೆ ಮೀಸಲು ದಿನವಿರುವುದು ಸಮಾಧಾನಕರ.