ಕೊಲಂಬೊ: ಏಷ್ಯಾಕಪ್ನ ಲೀಗ್ ಹಂತದಲ್ಲಿ ಪಲ್ಲೆಕಿಲೆಯಲ್ಲಿ ಭಾರತ-ಪಾಕ್ ನಡುವಿನ ಮುಖಾಮುಖಿ ಮಳೆಯಿಂದಾಗಿ ರದ್ದುಗೊಂಡಿತ್ತು. ಇದೀಗ ಟೂರ್ನಿಯ ಸೂಪರ್-4 ಹಂತದಲ್ಲಿ ಮುಂದಿನ ಭಾನುವಾರ ಉಭಯ ತಂಡಗಳ ನಡುವಿನ ಮರುಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದರೂ, ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಹವಾಮಾನ ಮುನ್ಸೂಚನೆಯ ಪ್ರಕಾರ ಭಾನುವಾರ ಕೊಲಂಬೊದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಅಧಿಕವಾಗಿದೆ. ಇದಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸಿದೆ.
ಇತ್ತೀಚೆಗೆ ವಾತಾವರಣ ಸುಧಾರಿಸಿದ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕೊಲಂಬೊದ ಪಂದ್ಯಗಳನ್ನು ಸ್ಥಳಾಂತರಿಸಿಲ್ಲ. ಆದರೆ ಕೊಲಂಬೊದ ಎಲ್ಲ ಪಂದ್ಯಗಳು ಮಳೆ ಭೀತಿಯ ನಡುವೆಯೇ ನಡೆಯುವುದು ನಿಶ್ಚಿತವೆನಿಸಿದೆ. ಶ್ರೀಲಂಕಾ-ಬಾಂಗ್ಲಾದೇಶ ನಡುವೆ ಸೆಪ್ಟೆಂಬರ್ 12 ಮತ್ತು ಭಾರತ-ಶ್ರೀಲಂಕಾ ನಡುವೆ ಸೆಪ್ಟೆಂಬರ್ 11ರಂದು ನಿಗದಿಯಾಗಿರುವ ಸೂಪರ್-4 ಪಂದ್ಯಗಳೂ ಹೆಚ್ಚಿನ ಮಳೆ ಭೀತಿ ಹೊಂದಿದೆ. ಆದರೆ ಸೆಪ್ಟೆಂಬರ್ 15ರಂದು ನಡೆಯಲಿರುವ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್&4ರ ಕೊನೇ ಪಂದ್ಯಕ್ಕೆ ಮಳೆ ಭೀತಿ ಕಡಿಮೆ ಇದೆ.
ಮೊದಲ ಹಂತದಲ್ಲಿ ಭಾರತ-ಪಾಕ್ ಪಂದ್ಯ ರದ್ದುಗೊಂಡರೂ, ಸೂಪರ್-4 ಹಂತಕ್ಕೇರಲು ಉಭಯ ತಂಡಗಳಿಗೂ ಯಾವುದೇ ಸಮಸ್ಯೆಯಾಗಲಿಲ್ಲ. ಆದರೆ ಸೂಪರ್-4ರಲ್ಲಿ ಯಾವುದಾದರೂ ಪಂದ್ಯ ಮಳೆಯಿಂದಾಗಿ ರದ್ದಾದರೆ ಲೆಕ್ಕಾಚಾರಗಳು ಬದಲಾಗುವ ಅಪಾಯವಿದೆ. ಸೂಪರ್-4ರಲ್ಲಿ ಎಲ್ಲ 4 ತಂಡಗಳು ತಲಾ ಒಂದು ಬಾರಿ ಮುಖಾಮುಖಿ ಆಗಲಿದ್ದು, ಅಗ್ರ 2 ತಂಡಗಳು ಫೈನಲ್ಗೇರಲಿವೆ.
ಮೀಸಲು ದಿನವಿದೆ
ಮಳೆ ಭೀತಿಯ ನಡುವೆ ಕೊಲಂಬೊದ ಪಂದ್ಯಗಳನ್ನು ಸ್ಥಳಾಂತರಿಸದಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಭಾರತ-ಪಾಕ್ ನಡುವಿನ ಭಾನುವಾರದ ಸೂಪರ್-4 ಪಂದ್ಯ ಮತ್ತು ಸೆಪ್ಟೆಂಬರ್ 17ರ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿ, ಈ ಬಾರಿ ಪಂದ್ಯ ರದ್ದಾಗುವುದನ್ನು ತಪ್ಪಿಸಲು ವಿಶೇಷ ಯೋಜನೆ ರೂಪಿಸಿದೆ. ಇದರನ್ವಯ ಭಾರತ-ಪಾಕ್ ಪಂದ್ಯಕ್ಕೆ ಸೋಮವಾರ ಮತ್ತು ಫೈನಲ್ಗೆ ಸೆಪ್ಟೆಂಬರ್ 18 ಮೀಸಲು ದಿನವಾಗಿರುತ್ತದೆ. ಆದರೆ ಪಂದ್ಯದ ದಿನವೇ ಕನಿಷ್ಠ 20 ಓವರ್ಗಳ ಆಟವಾಡಿಸಿ ಡಕ್ವತ್-ಲೂಯಿಸ್ ನಿಯಮದನ್ವಯ ಫಲಿತಾಂಶ ನಿರ್ಧರಿಸಲು ಪ್ರಯತ್ನಿಸಲಾಗುತ್ತದೆ.
*ಪಂದ್ಯದ ವೇಳೆ ಮಳೆ ಬಂದರೆ ಪರಿಸ್ಥಿತಿ ನಿಭಾಯಿಸುವುದು ಕಠಿಣವೆನಿಸುತ್ತದೆ. ಆದರೆ ನಾವು ಸವಾಲು ಎದುರಿಸಲು ಸನ್ನದ್ಧರಾಗಿದ್ದೇವೆ. ಹವಾಮಾನ ಇಲಾಖೆ ಕೇವಲ 12 ದಿನ ಮುಂಚಿತವಾಗಿ ಮಳೆ ಮುನ್ಸೂಚನೆ ನೀಡಬಲ್ಲುದು. ನಾವೀಗ ಮುಂದಿನ 12 ದಿನಗಳ ವರದಿ ಪಡೆದುಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ನಡೆಸಲಿದ್ದೇವೆ.
| ಗಾಡ್ಫ್ರೇ ದಬ್ರೇರಾ, ಲಂಕಾ ಪಿಚ್ ಕ್ಯುರೇಟರ್