ಕ್ರೀಡೆ

Samith Dravid: ಟೀಮ್​​ ಇಂಡಿಯಾದಿಂದ ರಾಹುಲ್​ ದ್ರಾವಿಡ್​ ಪುತ್ರನಿಗೆ ಗೇಟ್​ಪಾಸ್​! ಕಾರಣ ಹೀಗಿದೆ…

ನವದೆಹಲಿ: ಟೀಮ್​ ಇಂಡಿಯಾದ ದಿಗ್ಗಜ ಕ್ರಿಕೆಟಿಗ, ಮಾಜಿ ಕೋಚ್​ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್​ ದ್ರಾವಿಡ್​ (Samith Dravid) ಅವರನ್ನು ಅಂಡರ್-19 ಭಾರತ ತಂಡದಿಂದ ತೆಗೆದುಹಾಕಲಾಗಿದ್ದು, ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಚಿತ್ರರಂಗದಲ್ಲಿ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಮಕ್ಕಳು ಕಲಾವಿದರಾಗುವುದು ಸಹಜ. ಅಲ್ಲದೆ, ರಾಜಕೀಯದಲ್ಲೂ ವಂಶಪಾರಂಪರ್ಯವಾಗಿ ರಾಜಕಾರಣ ನಡೆದುಕೊಂಡು ಬರುತ್ತದೆ. ಅದೇ ರೀತಿ, ಶ್ರೇಷ್ಠ ಆಟಗಾರರು ಕೂಡ ತಮ್ಮ ಮಕ್ಕಳು ತಮ್ಮಂತೆಯೇ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಈಗಾಗಲೇ ಗವಾಸ್ಕರ್ ಅವರ ಪುತ್ರ ರೋಹನ್ ಗವಾಸ್ಕರ್ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಆದರೆ, ತಂದೆಯಂತೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಇದರಂತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. ಅರ್ಜುನ್ ತೆಂಡೂಲ್ಕರ್ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.

ಭಾರತ ತಂಡದ ಮಹಾಗೋಡೆ ಎಂದೇ ಖ್ಯಾತಿ ಪಡೆದಿರುವ ರಾಹುಲ್ ದ್ರಾವಿಡ್ ಪುತ್ರ, ಸಮೀತ್ ದ್ರಾವಿಡ್ ಸ್ಥಳೀಯ ಕ್ರಿಕೆಟ್​ನಲ್ಲಿ ಅಮೋಘ ಆಟವಾಡಿದರು. ಹೀಗಾಗಿ ಅವರನ್ನು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಏಕದಿನ ಮತ್ತು ಒಂದು ಟೆಸ್ಟ್ ಸರಣಿಗಾಗಿ ಅಂಡರ್-19 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದರಿಂದ ಸಮಿತ್​ ಟೀಮ್​ ಇಂಡಿಯಾಗೆ ಸೇರುತ್ತಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಸಮೀತ್ ದ್ರಾವಿಡ್, ಮೊದಲ ಮತ್ತು ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇರಲಿಲ್ಲ. ಇದರಿಂದ ಅಭಿಮಾನಿಗಳು ಬಹಳ ನಿರಾಸೆಗೊಂಡರು. ಇದರ ನಡುವೆ ಅಂಡರ್​ 19 ತಂಡಕ್ಕೆ ಸಮಿತ್ ದ್ರಾವಿಡ್ ಬದಲಿಗೆ ರೋಹಿತ್ ರಾಜವಾಡ್ ಎಂಬ ಆಟಗಾರನಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಮಿತ್ ದ್ರಾವಿಡ್ ಅವರನ್ನು ತಂಡದಿಂದ ಏಕೆ ತೆಗೆದುಹಾಕಲಾಯಿತು? ಇದರ ಹಿಂದೆ ಏನಾದರೂ ರಾಜಕೀಯ ಇದೆಯೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇತ್ತೀಚಿನ ಮಹಾರಾಜ ಟಿ20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಹೆಚ್ಚಿನ ಸಾಧನೆ ಮಾಡಲಿಲ್ಲ. ಅವರು ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರ್ ಕೇವಲ 33 ಆಗಿತ್ತು. ಬ್ಯಾಟಿಂಗ್​ ಮಾತ್ರವಲ್ಲದೆ ಸಮಿತ್ ದ್ರಾವಿಡ್, ಬೌಲಿಂಗ್ ಮಾಡುವುದನ್ನೂ ತಿಳಿದಿದ್ದಾರೆ. ಆದರೆ ಮಹಾರಾಜ ಟೂರ್ನಿಯಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ಗಾಯವಾಗಿರುವ ಕಾರಣಕ್ಕೆ ಅವರನ್ನು ತಂಡದಿಂದ ತೆಗೆದುಹಾಕಲಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. (ಏಜೆನ್ಸೀಸ್​)