ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತವನ್ನು ಬಿಸಿಸಿಐ ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ವೆಸ್ಟ್ಇಂಡೀಸ್ನಲ್ಲಿ ವಿಶ್ವಕಪ್ ಗೆದ್ದು ಟ್ರೋಫಿಗೆ ಮುತ್ತಿಟ್ಟ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿದರು. ಅಲ್ಲದೆ, ಭಾರತಕ್ಕೆ ಮರಳಿದ ಟೀಮ್ ಇಂಡಿಯಾ ಆಟಗಾರರನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ತಂಡದಲ್ಲಿರುವ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಮತ್ತು ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ಗೆ ಆಟಗಾರರಿಗೆ ಸರಿಸಮನಾಗಿ 5 ಕೋಟಿ ರೂ. ನೀಡಲು ಬಿಸಿಸಿಐ ನಿರ್ಧರಿಸಿದೆ. ಆದರೆ, ದ್ರಾವಿಡ್ 5 ಕೋಟಿ ಬೇಡ ಎನ್ನುವ ಮೂಲಕ ಬಿಸಿಸಿಐ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಅಕ್ಷರಶಃ ದ್ರಾವಿಡ್ ಇಲ್ಲಿಯೂ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.
ದ್ರಾವಿಡ್ ಅವರ ದೊಡ್ಡತನ ಏನು ಅಂತಾ ನೋಡುವುದಾದರೆ, ತಮ್ಮ ಕೋಚಿಂಗ್ ಸ್ಟಾಫ್ಗೆ ನೀಡಿರುವ ಬಹುಮಾನ ಮೊತ್ತವನ್ನೇ ತನಗೂ ನೀಡುವಂತೆ ಬಿಸಿಸಿಐ ಬಳಿ ಕೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. ನನ್ನಷ್ಟೇ ಶ್ರಮವನ್ನು ನನ್ನ ಸ್ಟಾಫ್ ಕೂಡ ಹಾಕಿದ್ದಾರೆ. ಅವರಿಗೆ ಸಮಾನ ಗೌರವ ಸಿಗಲಿ ಎಂಬುದು ದ್ರಾವಿಡ್ ಅವರ ದೊಡ್ಡ ಗುಣ.
ಆಟಗಾರರಿಗೆ ತಲಾ ಐದು ಕೋಟಿಯಾದರೆ, ಮುಖ್ಯ ಕೋಚ್ ದ್ರಾವಿಡ್ ಹೊರತುಪಡಿಸಿ, ಕೋಚಿಂಗ್ ಸ್ಟಾಫ್ಗೆ ತಲಾ 2.5 ಕೋಟಿ ರೂ. ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಆದರೆ, ಸಹಾಯಕ ಕೋಚ್‌ಗಳಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ 2.5 ಕೋಟಿ ರೂಪಾಯಿ ನೀಡಿದಂತೆ ನನಗೂ 2.5 ಕೋಟಿ ರೂ. ನೀಡಿ ಎಂದು ದ್ರಾವಿಡ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ತಮ್ಮ ಈ ನಿರ್ಧಾರದಿಂದ ದ್ರಾವಿಡ್ 2.5 ಕೋಟಿ ರೂ. ಕಳೆದುಕೊಳ್ಳಲಿದ್ದಾರೆ. ಆದರೆ, ಜನರ ಹೃದಯವನ್ನು ಗೆದ್ದಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ದ್ರಾವಿಡ್ ಅವರು 2018ರ ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಮುಖ್ಯ ಕೋಚ್ ಆಗಿದ್ದರು. ಈ ವೇಳೆ ತೆಗೆದುಕೊಂಡ ಅದೇ ನಿರ್ಧಾರವನ್ನು ಇದೀಗ ತೆಗೆದುಕೊಂಡಿದ್ದಾರೆ. 2018ರಲ್ಲಿ ದ್ರಾವಿಡ್ ಅವರು 50 ಲಕ್ಷ ರೂ. ಬಹುಮಾನವನ್ನು ಪಡೆಯಬೇಕಿತ್ತು. ಸಹಾಯಕ ಸಿಬ್ಬಂದಿಯ ಇತರ ಸದಸ್ಯರು ತಲಾ 20 ಲಕ್ಷ ರೂ. ಹಾಗೂ ಆಟಗಾರರು ತಲಾ 30 ಲಕ್ಷ ರೂ. ಪಡೆಯಬೇಕಿತ್ತು. ಆದರೆ, ದ್ರಾವಿಡ್ ಈ ಅಸಮಾನತೆಯನ್ನು ನಿರಾಕರಿಸಿದರು ಮತ್ತು ಎಲ್ಲರಿಗೂ ಸಮಾನವಾಗಿ ಬಹುಮಾನ ನೀಡುವಂತೆ ಬಿಸಿಸಿಐ ಅನ್ನು ಒತ್ತಾಯಿಸಿದರು. ಇದಾದ ಬಳಿಕ ಬಿಸಿಸಿಐ ನಗದು ಪ್ರಶಸ್ತಿಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ವೇಳೆ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರು 25 ಲಕ್ಷ ಪಡೆದರು.
ಪದೇ ಪದೇ, ದ್ರಾವಿಡ್ ತಮ್ಮ ನಿಸ್ವಾರ್ಥ ಶೈಲಿಗೆ ಪ್ರಶಂಸೆಗಳನ್ನು ಗಳಿಸಿದ್ದಾರೆ. ಬಿಸಿಸಿಐ ಈಗಲೂ ದ್ರಾವಿಡ್ ಅವರ ನಿಲುವನ್ನು ಅನುಸರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ದ್ರಾವಿಡ್ ಅವರು ತನ್ನ ಕೋಚಿಂಗ್ ತಂಡಕ್ಕಾಗಿ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)