ಬ್ರಿಸ್ಬೇನ್: ಗಾಬಾ ಟೆಸ್ಟ್ ಬಳಿಕ ಅಶ್ವಿನ್ ನಿವೃತ್ತಿ ಪ್ರಕಟಿಸುವ ಮುನ್ನ ಡ್ರೆಸ್ಸಿಂಗ್ ರೂಮ್ನಲ್ಲಿ ವಿರಾಟ್ ಕೊಹ್ಲಿ ಬಳಿ ಕುಳಿತು ತಮ್ಮ ನಿರ್ಧಾರವನ್ನು ತಿಳಿಸಿದರು. ಈ ವೇಳೆ ಕೊಹ್ಲಿ ಭಾವುಕರಾಗಿ ಅಶ್ವಿನ್ರನ್ನು ಅಪ್ಪಿಕೊಂಡರು.
"ನಾನು 14 ವರ್ಷಗಳ ನಿಮ್ಮೊಂದಿಗೆ ಆಡಿರುವೆ. ಹೀಗಾಗಿ ನೀವು ನಿವೃತ್ತಿ ನಿರ್ಧಾರ ತಿಳಿಸಿದಾಗ ನಾನು ಸ್ವಲ್ಪ ಭಾವುಕನಾದೆ. ನಾವು ಜತೆಯಾಗಿ ಆಡಿದ ದಿನಗಳ ನೆನಪುಗಳೆಲ್ಲ ಮರುಕಳಿಸಿದವು. ಆಶ್ ನಿಮ್ಮೊಂದಿಗಿನ ಪ್ರತಿ ಕ್ಷಣವನ್ನೂ ಆನಂದಿಸಿರುವೆ. ನಿಮ್ಮ ಪಂದ್ಯ ಗೆಲ್ಲಿಸುವ ಕೊಡುಗೆ ಮತ್ತು ಕೌಶಲ ಸಾಟಿ ಇಲ್ಲದ್ದು. ನೀವು ಭಾರತೀಯ ಕ್ರಿಕೆಟ್ನಲ್ಲಿ ಯಾವಾಗಲೂ ದಿಗ್ಗಜರಾಗಿ ಸ್ಮರಿಸಲ್ಪಡುತ್ತೀರಿ. ನಿಮಗೆ ಅಪಾರ ಗೌರವದ ಜತೆಗೆ ಪ್ರೀತಿಯನ್ನು ನೀಡುವೆ. ನಿಮ್ಮ ಕುಟುಂಬದೊಂದಿಗೆ ಕಳೆಯುವ ಭವಿಷ್ಯದ ದಿನಗಳಿಗೆ ಶುಭವಾಗಲಿ' ಎಂದು ಕೊಹ್ಲಿ ನಂತರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
*ಅಶ್ವಿನ್ ನಿಮ್ಮ ಜರ್ನಿ ಅಸಾಧಾರಣಕ್ಕಿಂತ ಕಡಿಮೆಯೇನಲ್ಲ. 700ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಕೆಟ್ ಮತ್ತು ಕ್ರಿಕೆಟಿಂಗ್ ಮೈಂಡ್ನೊಂದಿಗೆ ನೀವು ಮೈದಾನದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದೀರಿ. ಅಮೋಘ ವೃತ್ತೀಜಿವನಕ್ಕಾಗಿ ಅಭಿನಂದನೆಗಳು. ಮೈದಾನದ ಹೊರಗಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ.
| ಅನಿಲ್ ಕುಂಬ್ಳೆ, ಮಾಜಿ ಸ್ಪಿನ್ನರ್
*ಪರಿಪೂರ್ಣ ಕ್ಯಾರಂ ಬಾಲ್ನಿಂದ ಅಮೂಲ್ಯ ರನ್ ಕೊಡುಗೆಯವರೆಗೆ ಅಶ್ವಿನ್ ಯಾವಾಗಲೂ ಗೆಲುವಿನ ಹಾದಿಯನ್ನು ಹುಡುಕುವವರು. ಪ್ರತಿಭಾನ್ವಿತ ಆಟಗಾರನಿಂದ ಭಾರತ ಕಂಡ ಅತ್ಯುತ್ತಮ ಮ್ಯಾಚ್ ವಿನ್ನರ್ಗಳಲ್ಲಿ ಒಬ್ಬರಾಗಿ ಬೆಳೆದಿರುವುದನ್ನು ನೋಡಿರುವೆ. ನಿಮ್ಮ 2ನೇ ಇನಿಂಗ್ಸ್ಗೆ ಶುಭವಾಗಲಿ.
| ಸಚಿನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ
*ಯುವ ಬೌಲರ್ನಿಂದ ಆಧುನಿಕ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿ ಬೆಳೆದಿರುವುದನ್ನು ನೋಡಿರುವುದೇ ಭಾಗ್ಯ. ಅಶ್ವಿನ್ ಅವರಿಂದಾಗಿ ನಾನು ಬೌಲರ್ ಆದೆ ಎಂದು ಮುಂದಿನ ತಲೆಮಾರಿನವರು ಖಂಡಿತವಾಗಿಯೂ ಹೇಳಲಿದ್ದಾರೆ. ಸಹೋದರ ನಿಮ್ಮನ್ನು ಮಿಸ್ ಮಾಡಿಕೊಳ್ಳುವೆ.
| ಗೌತಮ್ ಗಂಭೀರ್, ಭಾರತದ ಮುಖ್ಯ ಕೋಚ್