ಕ್ರೀಡೆ

ಕರೊನಾ ಬಿಕ್ಕಟ್ಟಿನ ಮಧ್ಯೆ ಚುಟುಕು ಕ್ರಿಕೆಟ್​: ಐಪಿಎಲ್​ ಅಭಿಮಾನಿಗಳನ್ನು ಪ್ರಶ್ನಿಸಿದ ಟಿಎಂಸಿ ಸಂಸದೆ!

ನವದೆಹಲಿ: ಕರೊನಾ ಎರಡನೇ ಅಲೆಯ ಪರಿಣಾಮದಿಂದ ದೇಶದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ. ಎತ್ತ ನೋಡಿದರೂ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ದೇಶವು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಐಪಿಎಲ್​ ಟೂರ್ನಿ ಮುಂದುವರಿಯ ಬೇಕಾ?

ಹೀಗಂತಾ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಭಾರತೀಯ ಕ್ರೀಡಾಭಿಮಾನಿಗಳನ್ನು ಪ್ರಶ್ನೆ ಮಾಡಿದ್ದಾರೆ.

ಐಪಿಎಲ್​ ಸಂಬಂಧ ಟ್ವೀಟ್​ ಮಾಡಿರುವ ಮಹುವಾ ಮೊಯಿತ್ರಾ, ಈ ಮಾರಣಾಂತಿಕ ಅವ್ಯವಸ್ಥೆಯ ಮಧ್ಯದಲ್ಲಿ ಐಪಿಎಲ್ ಏಕೆ ನಡೆಸಲಾಗುತ್ತಿದೆ. ಭಾರತೀಯ ಕ್ರೀಡಾಭಿಮಾನಿಗಳು ನಿಜವಾಗಿಯೂ ಈ ಭೀಕರ “ವ್ಯಾಕುಲತೆ”ಯನ್ನು ಬಯಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಐಪಿಎಲ್​ ಅನ್ನು ಮೊಟಕುಗೊಳಿಸುವಂತೆ ಸಂದೇಶ ರವಾನಿಸಿದ್ದಾರೆ.

ಇನ್ನು ಶುಕ್ರವಾರ ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದೃಢವಾಗಿವೆ. 24 ಗಂಟೆಗಳಲ್ಲಿ 3500ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟು 1.91 ಕೋಟಿ ಪ್ರಕರಣಗಳು ದೃಢವಾಗಿವೆ. ಅದರಲ್ಲಿ 1.56 ಕೋಟಿ ಸೋಂಕಿತರು ಗುಣಮುಖವಾಗಿದ್ದರೆ, 32.63 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿ ಇವೆ. ಸೋಂಕಿನಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 2.11 ಲಕ್ಷಕ್ಕೆ ತಲುಪಿದೆ. (ಏಜೆನ್ಸೀಸ್​)