ಲಾಹೋರ್: ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮತ್ತು ಪಾಕಿಸ್ತಾನ ಬೌಲರ್ ಶಾಹೀನ್ ಶಾ ಅಫ್ರಿದಿ ಮೈದಾನದಲ್ಲಿ ಇದ್ರೆ ಅಭಿಮಾನಿಗಳಿಗಂತೂ ಯಾವುದೇ ಕಾರಣಕ್ಕೂ ಫನ್ ಮಿಸ್ ಆಗುವುದೇ ಇಲ್ಲ. ಇಬ್ಬರು ಕೂಡ ಆಗಾಗ ವಿಭಿನ್ನವಾಗಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಇರುತ್ತಾರೆ. ಪ್ರಸ್ತುತ ಆಸಿಸ್ ಮತ್ತು ಪಾಕ್ ನಡುವೆ ಲಾಹೋರ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲೂ ಇಂಥದ್ದೊಂದು ಸನ್ನಿವೇಶ ಜರುಗಿದೆ.
ಟೆಸ್ಟ್ ಪಂದ್ಯದ ಮೂರನೇ ದಿನದ ಕೊನೆಯ ಎಸೆತದಲ್ಲಿ ವಾರ್ನರ್ ಮತ್ತು ಶಾಹೀನ್ ಮುಖಾಮುಖಿಯಾದ ರೀತಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಈ ಪ್ರಸಂಗ ಜರುಗಿದೆ. ಮೂರನೇ ದಿನದ ಕೊನೆಯ ಎಸೆತವನ್ನು ಶಾಹೀನ್, ವಾರ್ನರ್ಗೆ ಎಸೆಯುತ್ತಾರೆ. ಅದನ್ನು ವಾರ್ನರ್ ಡಿಫೆಂಡ್ ಮಾಡುತ್ತಾರೆ. ಈ ವೇಳೆ ಚೆಂಡು ವಾರ್ನರ್ ಅವರ ಬಲಗಾಲಿನ ಕೆಳಗೆ ಬೀಳುತ್ತದೆ. ಬಳಿಕ ಶಾಹೀನ್ ವಾರ್ನರ್ ಬಳಿ ಓಡಿಬಂದು ನಿಲ್ಲುತ್ತಾರೆ. ವಾರ್ನರ್ ಕೂಡ ಶಾಹೀನ್ ಕಡೆ ನಡೆದು ಬರುತ್ತಾರೆ. ಈ ವೇಳೆ ಇಬ್ಬರು ಮುಖಾಮುಖಿಯಾಗುತ್ತಾರೆ. ವಾರ್ನರ್ ತುಂಬಾ ಹತ್ತಿರ ಬಂದು ಶಾಹೀನ್ ಮೈಗೆ ಮೈ ತಾಗಿಸಿ ನಿಂತು ಮುಖ ಮೇಲೆ ಮಾಡಿ ಏನಪ್ಪಾ ಇಷ್ಟುದ್ದು ಇದಿಯಾ ಎನ್ನುವಂತೆ ಶಾಹೀನ್ರನ್ನು ನೋಡುತ್ತಾರೆ. ಬಳಿಕ ಇಬ್ಬರು ನಗುತ್ತಾ ಮೈದಾನದಿಂದ ಹೊರ ಹೋಗುತ್ತಾರೆ. ಮೊದಲೇ ಶಾಹೀನ್ ತುಂಬಾ ಎತ್ತರ ಇರುವುದರಿಂದ ಈ ಸನ್ನಿವೇಶವನ್ನು ನೋಡಿ ಮೈದಾನದಲ್ಲಿದ್ದ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಾರ್ನರ್ ಮತ್ತು ಶಾಹೀನ್ ಫನ್ ನೋಡಿದ ಪ್ಯಾಟ್ ಕಮ್ಮಿನ್ಸ್ ಮತ್ತು ಮಾರ್ನಸ್ ಲ್ಯಾಬುಶೇನ್ ಡ್ರೆಸ್ಸಿಂಗ್ ಕೋಣೆಯಲ್ಲಿ ನಗುತ್ತಿರುವ ದೃಶ್ಯ ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 391 ರನ್ ಗಳಿಸಿತ್ತು. ಆಸಿಸ್ ಉಸ್ಮಾನ್ ಖವಾಜಾ 91 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವನ್ನು 268ಕ್ಕೆ ಆಲೌಟ್ ಮಾಡಿದ ನಂತರ ಆಸ್ಟ್ರೇಲಿಯಾ 134 ರನ್ ಮುನ್ನಡೆ ಕಾಯ್ದುಕೊಂಡಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. (ಏಜೆನ್ಸೀಸ್)