ನವದೆಹಲಿ: ಏಷ್ಯಾ ಕಪ್ನಲ್ಲಿ ಪಂದ್ಯ ಸೋತಿದ್ದಕ್ಕೆ ಹತಾಶರಾದ ಅಫ್ಘಾನಿಸ್ತಾನದ ಕ್ರಿಕೆಟ್ ಪ್ರೇಮಿಗಳು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳ ಮೇಲೆ ಆಕ್ರೋಶ ಹೊರ ಹಾಕಿ, ಕ್ರೀಡಾಂಗಣದಲ್ಲಿ ಕುರ್ಚಿಗಳನ್ನು ಕಿತ್ತೆಸೆದು, ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ನಿನ್ನೆ (ಸೆ.07) ಶಾರ್ಜಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ಆಫ್ಘಾನ್ ನಡುವೆ ನಡೆದ ಪಂದ್ಯವು ಕೊನೆಯವರೆಗೂ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನು ಹಿಡಿದಿಟ್ಟಿತ್ತು. ಕೊನೆಯ ಓವರ್ನ ಕೊನೆಯ ವಿಕೆಟ್ನಲ್ಲಿ ಪಾಕ್ ವೇಗಿ ನಾಸೀಮ್ ಶಾ ಎರಡು ಸಿಕ್ಸರ್ ಬಾರಿಸುವ ಮೂಲಕ ಆಫ್ಘಾನ್ ಕಡೆಯಿದ್ದ ಪಂದ್ಯವನ್ನು ಪಾಕ್ ಕಡೆ ತಿರುಗಿಸಿದರು. ಇದರ ಬೆನ್ನಲ್ಲೇ ಹತಾಶರಾದ ಆಫ್ಘಾನ್ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದಲ್ಲಿದ್ದ ಕುರ್ಚಿಗಳನ್ನು ಕಿತ್ತು ಎಸೆದಾಡಿದರು. ಅಲ್ಲದೆ, ಅದೇ ಕುರ್ಚಿಯಲ್ಲಿ ಪಾಕ್ ಅಭಿಮಾನಿಗಳಿಗೂ ಬಾರಿಸಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದು, ಆಫ್ಘಾನ್ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ನೋಡಿ. ಈ ಹಿಂದೆಯು ಹಲವಾರು ಬಾರಿ ಇದೇ ರೀತಿ ಮಾಡಿದ್ದಾರೆ. ಇದು ಆಟವಾಗಿದೆ ಮತ್ತು ಇದನ್ನು ಸರಿಯಾದ ಉತ್ಸಾಹದಲ್ಲಿ ಆಡಬೇಕು ಮತ್ತು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಆಫ್ಘಾನ್ ಕ್ರಿಕೆಟ್ ಬೋರ್ಡ್ನ ಮಾಜಿ ಸಿಇಒ ಶಫೀಕ್ ಸ್ಟಾನಿಕ್ಜೈ ಟ್ಯಾಗ್ ಮಾಡಿ ನಿಮ್ಮ ಜನ ಮತ್ತು ನಿಮ್ಮ ಆಟಗಾರರು ಕ್ರೀಡೆಯಲ್ಲಿ ಬೆಳೆಯಬೇಕೆಂದರೆ ಕೆಲವು ವಿಚಾರಗಳನ್ನು ಕಲಿಯಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಫೀಕ್ ಸ್ಟಾನಿಕ್ಜೈ, ಅಭಿಮಾನಿಗಳ ಭಾವನೆಯನ್ನು ನಿಯಂತ್ರಣ ಮಾಡಲು ಆಗುವುದಿಲ್ಲ. ಈ ರೀತಿಯ ಘಟನೆ ವಿಶ್ವ ಕ್ರಿಕೆಟ್ನಲ್ಲಿ ಅನೇಕ ಬಾರಿ ನಡೆದಿವೆ. ಬೇಕಿದ್ದರೆ, ನೀವು ಕಬೀರ್ ಖಾನ್, ಇಂಜಿಮಾಮ್ ಭಾಯ್ ಮತ್ತು ರಶೀದ್ ಲತೀಫ್ ಅವರ ಬಳಿ ಹೋಗಿ ಕೇಳಬಹುದು ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾರೆ, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಫ್ಘಾನ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆರ ಹಾಕಿತು. ಗುರಿ ಬೆನ್ನತ್ತಿದ ಪಾಕ್ 9 ವಿಕೆಟ್ಗಳ ನಷ್ಟಕ್ಕೆ 19.2 ಓವರ್ಗಳಲ್ಲಿ 131 ರನ್ ಕಲೆಹಾಕುವ ಮೂಲಕ ತುಂಬಾ ಶ್ರಮಪಟ್ಟು ಗುರಿ ಸೇರಿತು. (ಏಜೆನ್ಸೀಸ್)