ಕ್ರೀಡೆ

ವೇಗದ ಬೌಲರ್​ ಆಗಲು ಹೊರಟಿದ್ದ ಆರ್​. ಅಶ್ವಿನ್​ ಯಶಸ್ವಿ ಆಫ್​ ಸ್ಪಿನ್ನರ್​ ಆಗಿದ್ದು ಹೇಗೆ?

ಬ್ರಿಸ್ಬೇನ್: ರವಿಚಂದ್ರನ್​-ಚಿತ್ರಾ ದಂಪತಿಗೆ 1986ರ ಸೆಪ್ಟೆಂಬರ್​ 17ರಂದು ಮದ್ರಾಸ್​ನಲ್ಲಿ (ಈಗಿನ ಚೆನ್ನೈ) ಜನಿಸಿದ ಆರ್​. ಅಶ್ವಿನ್​ ತಂದೆ ಕ್ಲಬ್​ ಮಟ್ಟದ ಕ್ರಿಕೆಟಿಗರಾಗಿದ್ದರು. ತಂದೆಯಂತೆಯೇ ವೇಗದ ಬೌಲರ್​ ಆಗುವುದು ಅಶ್ವಿನ್​ ಕನಸಾಗಿತ್ತು. ಬಾಲ್ಯದಲ್ಲಿ ತಂದೆಯೊಂದಿಗೆ ಚೆಪಾಕ್​ ಮೈದಾನಕ್ಕೆ ಭಾರತ ತಂಡದ ಪಂದ್ಯಗಳನ್ನೂ ನೋಡಲು ಹೋಗುತ್ತಿದ್ದರು. ಆದರೆ ವೇಗದ ಎಸೆತಗಳನ್ನು ಎಸೆದ ಬಳಿಕ ಸುಸ್ತಾಗುತ್ತಿದ್ದ ಅವರು, ಕೋಚ್​ ಸಲಹೆಯ ಮೇರೆಗೆ ಆಫ್​ ಸ್ಪಿನ್ನರ್​ ಆಗಿ ಬದಲಾಗಿದ್ದರು. ಅಲ್ಲಿಂದ ಅಶ್ವಿನ್​ ಕ್ರಿಕೆಟರ್​ ಆಗಿ ಹೊಸ ಏಳ್ಗೆಯನ್ನು ಕಾಣಲಾರಂಭಿಸಿದರು.

ಬ್ಯಾಟಿಂಗ್​ನಲ್ಲೂ ಆಸಕ್ತಿ ಹೊಂದಿದ್ದ ಅವರು 17 ವಯೋಮಿತಿ ಭಾರತ ತಂಡದಲ್ಲಿ ಆರಂಭಿಕ ಬ್ಯಾಟರ್​ ಆಗಿ ಆಡಿದ್ದರು. ಆಫ್​ ಸ್ಪಿನ್​ ಬೌಲಿಂಗ್​ನಲ್ಲಿ ಕೇವಲ ದೂಸ್ರಾಗೆ ಒಗ್ಗಿಕೊಳ್ಳದೆ ಕೇರಂ ಬಾಲ್​ನಂಥ ಬೌಲಿಂಗ್​ ವೈವಿಧ್ಯತೆಯನ್ನೂ ಸಾಧಿಸಿದರು. 2009ರಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದರೂ ಎರಡೇ ಪಂದ್ಯ ಆಡಿದ್ದ ಅಶ್ವಿನ್​, 2010ರಲ್ಲಿ 13 ವಿಕೆಟ್​ ಕಬಳಿಸಿ ಮಿಂಚಿದರು. ಅದೇ ವರ್ಷ ಸಿಎಸ್​ಕೆ ಚೊಚ್ಚಲ ಐಪಿಎಲ್​ ಪ್ರಶಸ್ತಿಯನ್ನೂ ಗೆಲ್ಲುವುದರೊಂದಿಗೆ ಅಶ್ವಿನ್​ಗೆ ಟೀಮ್​ ಇಂಡಿಯಾದ ಬಾಗಿಲು ತೆರೆದಿತ್ತು.

ನಂತರ 2011ರ ಏಕದಿನ ವಿಶ್ವಕಪ್​ ವಿಜೇತ ತಂಡದಲ್ಲಿದ್ದ ಅವರು ಅದೇ ವರ್ಷ ಟೆಸ್ಟ್​ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದರು. ನಂತರದಲ್ಲಿ ಭಾರತದ "ಮ್ಯಾಚ್​ ವಿನ್ನರ್​' ಮಾತ್ರವಲ್ಲದೆ "ಸಿರೀಸ್​ ವಿನ್ನರ್​' ಬೌಲರ್​ ಆಗಿಯೂ ಬೆಳೆದರು. ಏಕದಿನ, ಟಿ20 ಪಂದ್ಯಗಳನ್ನು ಮೊದಲಿಗೆ ಆಡಿದರೂ, ನಂತರದಲ್ಲಿ ಆಡಿದ ಟೆಸ್ಟ್​ ಪಂದ್ಯವೇ ಅವರು ವೃತ್ತಿಜೀವನದಲ್ಲಿ ದಿಗ್ಗಜ ಸ್ಪಿನ್ನರ್​ ಆಗಿ ಬೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.