ಕ್ರೀಡೆ

ತಲೆಗೆ ಮುತ್ತಿಟ್ಟು ಅತಿರೇಕ ವರ್ತನೆ ತೋರಿದ ಕೃನಾಲ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ ಹಿರಿಯ ಆಟಗಾರರು!

ನವದೆಹಲಿ: ಏ. 24ರಂದು ನಡೆದ ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ಹಾಗೂ ಮುಂಬೈ ಇಂಡಿಯನ್ಸ್​ (ಎಂಐ) ನಡುವಿನ ಐಪಿಎಲ್​ ಪಂದ್ಯದಲ್ಲಿ ಎಲ್​ಎಸ್​ಜಿ ಆಟಗಾರ ಕೃನಾಲ್​ ಪಾಂಡ್ಯ ನಡೆದುಕೊಂಡ ರೀತಿಗೆ ಹಿರಿಯ ಆಟಗಾರರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

ಎಂಐ ಆಟಗಾರ ಕೀರನ್​ ಪೊಲಾರ್ಡ್ ವಿಕೆಟ್​ ಕಬಳಿಸಿದ ಕೃನಾಲ್​ ಅದನ್ನು ಸಂಭ್ರಮಿಸುವಾಗ ಅತಿರೇಕಕ್ಕೆ ಒಳಗಾಗಿ ಕ್ರೀಡಾಸ್ಫೂರ್ತಿಯನ್ನು ಮರೆತಿದ್ದಾರೆ. ಔಟ್​ ಆದ ಬಳಿಕ ಡಗ್​ಔಟ್​ ಕಡೆ ತೆರಳುತ್ತಿದ್ದ ಪೊಲಾರ್ಡ್​ ಬಳಿ ಹೋದ ಕೃನಾಲ್​, ತಲೆಗೆ ಮುತ್ತಿಟ್ಟು ಪೊಲಾರ್ಡ್​ ಅವರನ್ನು ಅಣುಕಿಸುವ ಮೂಲಕ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಕ್ಷಣ ಪ್ರತಿಕ್ರಿಯೆ ನೀಡುವ ಪೊಲಾರ್ಡ್​ ಮೊನ್ನೆಯ ಪಂದ್ಯದಲ್ಲಿ ಕೃನಾಲ್​ ಅತಿರೇಕ ಕಂಡು ಸುಮ್ಮನಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

ಆದರೆ, ಕೃನಾಲ್​ ವರ್ತನೆಗೆ ಹಿರಿಯ ಆಟಗಾರರು ಅಸಮಾಧಾನವನ್ನು ಹೊರಹಾಕಿದ್ದಾರೆ. ಪೊಲಾರ್ಡ್​ ಕೂಡ ಇದು ಇಷ್ಟ ಇಲ್ಲ ಎಂದು ನನಗೆ ತಿಳಿದಿದೆ. ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೂ ಮೈದಾನದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಸದ್ಯ ಪೊಲಾರ್ಡ್​ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದದ್ದು ಕೃನಾಲ್​ ಅದೃಷ್ಟ ಎಂದು ಮಾಜಿ ಕ್ರಿಕೆಟಿಗ್​ ಸುನಿಲ್​ ಗವಾಸ್ಕರ್​ ಹೇಳಿದ್ದಾರೆ.

ಮಾಜಿ ಆಟಗಾರ ಆರ್​.ಪಿ. ಸಿಂಗ್​ ಕೂಡ ಈ ಕುರಿತು ಮಾತನಾಡಿದ್ದು, ಈ ರೀತಿ ತಾಳ್ಮೆ ಕಳೆದುಕೊಳ್ಳುವುದನ್ನು ಯಾರೊಬ್ಬರು ಇಷ್ಟಪಡುವುದಿಲ್ಲ. ಔಟ್​ ಆದ ಪೊಲಾರ್ಡ್​ ಒಳಗೆ ಯಾವ ಭಾವನೆ ಇದೆ ಎಂಬುದು ನಿನಗೆ ತಿಳಿದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ರೀತಿ ಮಾಡುವುದು ಸರಿಯಲ್ಲ. ಒಂದು ವೇಳೆ ಪೊಲಾರ್ಡ್​ ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ್ದರೆ ಏನಾಗ್ತಿತ್ತು? ಮೊದಲೇ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದೆ ನಿರಾಶೆಯಿಂದ ಹಿಂದೆ ಸರಿಯುತ್ತಿದ್ದರು. ಇಂತಹ ವೇಳೆ ಪ್ರತಿಕ್ರಿಯಿಸಿದ್ದರೆ ಅಲ್ಲಿ ಬೇರೇನೆ ನಡೆಯುತ್ತಿತ್ತು ಎಂದು ಆರ್​.ಪಿ. ಸಿಂಗ್​ ಟೀಕಿಸಿದ್ದಾರೆ.

ಪಾರ್ಥೀವ್​ ಪಟೇಲ್​ ಮಾತನಾಡಿ, ಕೃನಾಲ್​ ಮತ್ತು ಪೊಲಾರ್ಡ್​ ಒಳ್ಳೆಯ ಸ್ನೇಹಿತರು ಎಂದು ತಿಳಿದಿದೆ. ಆದರೆ, ಮೈದಾನದಲ್ಲಿ ಪರಿಸ್ಥಿತಿ ಸ್ವಲ್ಪ ಬೇರೆಯಾಗಿರುತ್ತದೆ. ಅಲ್ಲಿನ ಭಾವನೆಗಳು ಕೂಡ ವಿಭಿನ್ನವಾಗಿರುತ್ತದೆ. ಪೊಲಾರ್ಡ್​ ಹೆಚ್ಚು ರನ್​ ಮಾಡಿಲ್ಲ. ಅಲ್ಲದೆ, ಮುಂಬೈ ಕೂಡ ಸಾಲು ಸಾಲು ಪಂದ್ಯಗಳನ್ನು ಕೈಚೆಲ್ಲಿದೆ. ಇಂತಹ ಸಂದರ್ಭದಲ್ಲಿ ಆ ತಂಡದ ಆಟಗಾರರಿಗೆ ಸಮಯ ಕೊಡಬೇಕಾಗಿರುವುದು ಅವಶ್ಯಕ. ಬೇಕಾದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ ಇಡೀ ವರ್ಷ ನಿಮಗೆ ಬೇಕಾದಷ್ಟು ತಮಾಷೆ ಮಾಡಬಹುದು. ಆದರೆ, ಈ ಪ್ರತಿಕ್ರಿಯೆಯು ಸ್ವಲ್ಪ ಅತಿರೇಕ ಎಂದು ನಾನು ಭಾವಿಸುತ್ತೇನೆಂದು ಪಾರ್ಥೀವ್​ ಪಟೇಲ್​ ಅವರು ಕೃನಾಲ್​ ನಡೆಯನ್ನು ಖಂಡಿಸಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ರಾಹುಲ್ ಏಕಾಂಗಿ ನಿರ್ವಹಣೆ ಫಲವಾಗಿ 6 ವಿಕೆಟ್‌ಗೆ 168 ರನ್ ಕಲೆಹಾಕಿತು. ಮುಂಬೈ ವಿರುದ್ಧದ ಹಿಂದಿನ ಮುಖಾಮುಖಿಯಲ್ಲೂ ರಾಹುಲ್ ಅಜೇಯ 103 ರನ್ ಬಾರಿಸಿದ್ದರು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗೆ 132 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ ಎಲ್‌ಎಸ್‌ಜಿ ಟೂರ್ನಿಯ ಎರಡೂ ಮುಖಾಮುಖಿಯಲ್ಲಿ ಮುಂಬೈ ತಂಡವನ್ನು ಮಣಿಸಿದಂತಾಯಿತು. (ಏಜೆನ್ಸೀಸ್​)