ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕ ಸ್ಟೀವ್ ಸ್ಮಿತ್ ಅವರು ಸುಮಾರು ಒಂದು ಗಂಟೆಗಳ ಕಾಲ ಒಬ್ಬರೇ ಲಿಫ್ಟ್ನಲ್ಲಿ ಸಿಲುಕಿದ ಘಟನೆ ಮೆಲ್ಬೋರ್ನ್ನ ಹೋಟೆಲ್ ಒಂದರಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸ್ಮಿತ್ ಅವರು ಲಿಫ್ಟ್ ಒಳಗೆ ಸಿಲುಕಿದ್ದ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವೇಳೆ ಸಹ ಆಟಗಾರ ಮಾರ್ನಸ್ ಲಬುಶೇನ್ ಅವರು ಲಿಫ್ಟ್ನ ರಂಧ್ರದ ಮೂಲಕ ಸ್ಮಿತ್ ಅವರಿಗೆ ಚಾಕೋಲೆಟ್ ನೀಡುವುದರೊಂದಿಗೆ ಸಹಾಯಕ್ಕೆ ನೆರವಾದರು.
ನಾನೀಗ ಲಿಫ್ಟ್ ಒಳಗಡೆ ಇದ್ದೇನೆ. ನಾನಿರುವ ಮಹಡಿಗೆ ಲಿಫ್ಟ್ ತಲುಪಿದೆ. ಆದರೆ, ಬಾಗಿಲು ಓಪನ್ ಆಗುತ್ತಿಲ್ಲ. ಮೇಲ್ನೋಟಕ್ಕೆ ಸೇವೆಯಿಂದ ಹೊರಗಿದೆ ಎಂದು ಕಾಣಿಸುತ್ತಿದೆ. ಬಾಗಿಲು ತೆರೆಯಲು ಯತ್ನಿಸಿದೆ. ಇನ್ನೊಂದು ಕಡೆಯಿಂದ ಮಾರ್ನಸ್ ಕೂಡ ಬಾಗಿಲು ತೆರೆಯಲು ಯತ್ನಿಸುತ್ತಿದ್ದಾರೆ ಎಂದು ಇನ್ಸ್ಟಾಗ್ರಾಂ ಲೈವ್ ವೇಳೆ ಸ್ಮಿತ್ ಹೇಳಿದ್ದಾರೆ.
ಅಂತಿಮವಾಗಿ ತಂತ್ರಜ್ಞರು ಲಿಫ್ಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು ಮತ್ತು ಲಿಫ್ಟ್ನಿಂದ ಹೊರಬಂದ ಸ್ಮಿತ್ ಅವರಿಗೆ ಆಸಿಸ್ನ ಸಹ ಆಟಗಾರರು ಚಪ್ಪಾಳೆ ತಟ್ಟಿ ಬರಮಾಡಿಕೊಂಡರು. ಕೊನೆಗೂ ಸುರಕ್ಷಿತವಾಗಿ ಕೊಠಡಿಗೆ ಮರಳಿದೆ. ಖಂಡಿತವಾಗಿಯೂ ಅದೊಂದು ಅನುಭವ ಆಗಿತ್ತು. ಆ 55 ನಿಮಿಷಗಳನ್ನು ನಾನು ಬಹುಶಃ ನಾನೆಂದಿಗೂ ನೆನಪಿಸಿಕೊಳ್ಳುವುದಿಲ್ಲ ಎಂದು ಸ್ಮಿತ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3-0 ಅಂತರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಸಿಸ್ ಪಡೆ ಸರಣಿ ವಶಪಡಿಸಿಕೊಂಡಿದೆ. ನಾಲ್ಕನೇ ಟೆಸ್ಟ್ ಪಂದ್ಯ ಜನವರಿ 5 ರಿಂದ ಆರಂಭವಾಗಲಿದೆ. (ಏಜೆನ್ಸೀಸ್)