ಕ್ರೀಡೆ

ಮೊದಲ ಬಾರಿಗೆ ಭಾರತದ ಬ್ರ್ಯಾಂಡ್​ ಜತೆ ಕೈಜೋಡಿಸಿದ ಖ್ಯಾಬೆ ಲಾಮೆ: ಒಟ್ಟು ಆದಾಯ ಕೇಳಿದ್ರೆ ದಂಗಾಗ್ತೀರಾ!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಖ್ಯಾಬೆ ಲಾಮೆ ಇದೇ ಮೊದಲ ಬಾರಿಗೆ ಭಾರತದ ಬ್ರ್ಯಾಂಡ್​ ಒಂದರ ಜತೆ ಕೈ ಜೋಡಿಸಿದ್ದಾರೆ.

ಒಂದೇ ಒಂದು ಮಾತನಾಡದೇ ಕೇವಲ ತನ್ನ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 47 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಖ್ಯಾಬೆ ಲಾಮೆ, ಟ್ವಿಟರ್​ನಲ್ಲಿಯು 1 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ.

ಟಿಕ್​ಟಾಕ್​ನಲ್ಲಂತೂ ಧೂಳೆಬ್ಬಿಸಿರುವ ಖ್ಯಾಬೆ ಲಾಮೆ ಬರೋಬ್ಬರಿ 100 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ವಿಶೇಷವೆಂದರೆ, ಅವರು ಯಾವೊಂದು ವಿಡಿಯೋದಲ್ಲೂ ಮ್ಯೂಸಿಕ್​ ಬಿಟ್ಟರೆ, ಅವರ ಧ್ವನಿ ಇರುವುದಿಲ್ಲ. ಕೈ ಸನ್ನೆ ಮೂಲಕವೇ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಖ್ಯಾಬೆ ಲಾಮೆ ಅವರ ಆದಾಯ 2 ಮಿಲಿಯನ್​ ಡಾಲರ್​ ಎಂದು ತಿಳಿದುಬಂದಿದೆ.

ಪ್ರಸ್ತುತ ಖ್ಯಾಬೆ ಲಾಮೆ ಅವರು ಭಾರತದ ಫ್ಯಾಂಟಸಿ ಸ್ಪೋರ್ಟ್ಸ್​ ಪ್ಲಾಟ್​ಫಾರ್ಮ್​ ಡ್ರೀಮ್​ 11 ಆ್ಯಪ್​ ಜತೆ ಕೈ ಜೋಡಿಸಿದ್ದಾರೆ. ಭಾರತೀಯ ಬ್ರ್ಯಾಂಡ್​ನೊಂದಿಗೆ ಖ್ಯಾಬೆ ಲಾಮೆ ಅವರ ಮೊದಲ ಸಹಭಾಗಿತ್ವ ಇದಾಗಿದೆ. ಅಂದಾಜಿನ ಪ್ರಕಾರ, 21 ವರ್ಷದ ಟಿಕ್‌ಟಾಕ್ ಸ್ಟಾರ್​ ಒಂದು ಪ್ರಚಾರದ ವೀಡಿಯೊಗೆ 50,000 ಡಾಲರ್​ ವಿಧಿಸುತ್ತಾರೆಂದು ತಿಳಿದುಬಂದಿದೆ. ಅಲ್ಲದೆ, ಪ್ರತಿ ತಿಂಗಳು ಅಂದಾಜು 200,000 ಡಾಲರ್​ ಗಳಿಸುತ್ತಾರೆಂದು ತಿಳಿದುಬಂದಿದೆ.

ಸೆನೆಗಲ್​ ಮೂಲದ ಖ್ಯಾಬೆ ಲಾಮೆ ಪ್ರಸ್ತುತ ಇಟಲಿಯಲ್ಲಿ ವಾಸವಿದ್ದು, ಇತ್ತೀಚೆಗಷ್ಟೇ ಟಿಕ್​ಟಾಕ್​ನಲ್ಲಿ ಲಾಮೆ 100 ಮಿಲಿಯನ್​ ಫಾಲೋವರ್ಸ್​ ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. (ಏಜೆನ್ಸೀಸ್)