ಕ್ರೀಡೆ

ಟಿ20 ವಿಶ್ವಕಪ್​: ಭಾರತವನ್ನು ಸೋಲಿಸಿದ್ರೆ PCB ಮುಖ್ಯಸ್ಥರಿಗೆ ಸಿಗುವ ಆಫರ್ ಬಗ್ಗೆ​ ಕೇಳಿದ್ರೆ ದಂಗಾಗ್ತೀರಾ!

ಇಸ್ಲಮಾಬಾದ್​: ಕ್ರೀಡಾ ಪ್ರೇಮಿಗಳು ಎದುರು ನೋಡುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇನ್ನೇನು ಶುರುವಾಗಬೇಕಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಜನರ ಗಮನ ಕೇಂದ್ರಿಕೃತವಾಗಿದೆ.

ಇಂಡೋ-ಪಾಕ್​ ಕ್ರಿಕೆಟ್​ ಕದನ ಕುರಿತು ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾವನ್ನು ಪಾಕ್​​ ಸೋಲಿಸಿದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್​ ರಾಜಾಗೆ ಬಂಪರ್​ ಆಫರ್ ದೊರೆಯಲಿದೆ.

ಹೌದು, ಪಾಕ್​ನ ಬಿಲಿಯನೇರ್​ ಒಬ್ಬರು ಬಂಪರ್​ ಆಫರ್​ ಪ್ರಸ್ತಾವನ್ನು ರಮೀಜ್​ ರಾಜಾ ಅವರ ಮುಂದಿಟ್ಟಿದ್ದು, ಪಾಕ್​ ಏನಾದರೂ ಭಾರತದ ವಿರುದ್ಧ ಗೆದ್ದರೆ ಸಹಿ ಮಾಡಿ ಬ್ಲ್ಯಾಂಕ್​ ಚೆಕ್​ ಅನ್ನು ಕೊಡಲಿದ್ದಾರಂತೆ. ​

ಅಕ್ಟೋಬರ್​ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿ ಆಗಲಿವೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದುವರೆಗೆ ಭಾರತ ಮತ್ತು ಪಾಕ್​ ಟಿ20 ವಿಶ್ವಕಪ್​ನಲ್ಲಿ 8 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ 7 ಬಾರಿ ವಿಜಯೋತ್ಸವ ಆಚರಿಸಿದೆ, ಆದರೆ, ಪಾಕ್​ ಮಾತ್ರ ಕೇವಲ ಒಂದಕ್ಕೆ ತೃಪ್ತಿಪಟ್ಟುಕೊಂಡಿದೆ.

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರಮೀಜ್ ರಾಜಾ, ಪಾಕಿಸ್ತಾನ ಕ್ರಿಕೆಟ್ ಅನ್ನು ವಿಶ್ವ ಕ್ರಿಕೆಟ್​ನಲ್ಲಿ ಪ್ರಬಲ ಶಕ್ತಿಯಾಗಿಸಲು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಐಸಿಸಿ ಮತ್ತು ಬಿಸಿಸಿಐ ಅನ್ನು ಅವಲಂಬಿಸುವುದಕ್ಕಿಂತ ಪಿಸಿಬಿ ಸ್ವಾವಲಂಬಿಯಾಗಬೇಕೆಂದು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)