ನವದೆಹಲಿ: ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರವಾಸಿ ಭಾರತ ಮಹಿಳಾ ತಂಡ ಡಕ್ವರ್ತ್ ಲೂಯಿಸ್ ನಿಯಮದಿಂದಾಗಿ 18 ರನ್ಗಳಿಂದ ಸೋಲನ್ನು ಅನುಭವಿಸಿದೆ.
ಶುಕ್ರವಾರ ರಾತ್ರಿ ಇಂಗ್ಲೆಂಡ್, ನಾರ್ಥ್ಹಾಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತರೂ, ಟೀಮ್ ಇಂಡಿಯಾದ ಹರ್ಲೀನ್ ಡಿಯೋಲ್ ಅವರ ಅದ್ಭುತ ಕ್ಯಾಚ್ ಎಲ್ಲರ ಗಮನ ಸೆಳೆಯಿತು.
ಇಂಗ್ಲೆಂಡ್ನ ಆ್ಯಮಿ ಎಲೆನ್ ಜೋನ್ಸ್ ಬಾರಿಸಿದ ಚೆಂಡು ಬೌಂಡರಿ ಗೆರೆಯಿಂದಾಚೆಗೆ ಬೀಳಬೇಕೆನ್ನುವಷ್ಟೆರಲ್ಲಿ ಲಾಂಗ್ ಆಫ್ನಲ್ಲಿದ್ದ ಹರ್ಲೀನ್ ಡಿಯೋಲ್, ಡೈವ್ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡರು. ಈ ವಿಡಿಯೋವನ್ನು ಟೀಮ್ ಇಂಡಿಯಾದ ಮಾಜಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ರಿಕೆಟ್ ಮೈದಾನದಲ್ಲಿ ಇದುವರೆಗೂ ನಾನು ನೋಡಿರದ ಅದ್ಭುತ ಕ್ಯಾಚ್ ಇದು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಪ್ರಯತ್ನ ನಡುವೆಯೂ ಪಂದ್ಯವು ಇಂಗ್ಲೆಂಡ್ ಪಾಲಾಯಿತು. ಆಂಗ್ರ ಪರ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ನತಾಲಿಯಾ ಸ್ಕಿವರ್ 27 ಎಸೆತಗಳಲ್ಲಿ 55 ರನ್ ಗಳಿಸಿದರೆ, ಜೋನ್ 27 ಎಸೆತಗಳಲ್ಲಿ 43 ರನ್ ಕಲೆಹಾಕಿದರು. ಇಬ್ಬರ ಅದ್ಭುತ ಆಟದಿಂದಾಗಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು.
ಗುರಿ ಬೆನ್ನತ್ತಿದ ಭಾರತಕ್ಕೆ ಶಫಾಲಿ ವರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತವಾಯಿತು. ಇದರ ಬೆನ್ನಲ್ಲೇ 29 ರನ್ ಗಳಿಸಿದ ಸ್ಮೃತಿ ಮಂದಾನ ಕೂಡ ಡಗೌಟ್ ಸೇರಿಕೊಂಡರು. ನಾಯಕಿ ಹರ್ಮನ್ಪ್ರಿತ್ ಕೌರ್ (1) ಜವಬ್ದಾರಿಯುತ ಆಟವಾಡಲಿಲ್ಲ. 3 ವಿಕೆಟ್ ನಷ್ಟಕ್ಕೆ ಭಾರತ 54 ರನ್ ಗಳಿಸಿದ್ದಾಗ ಆಗಮಿಸಿದ ಮಳೆ ಇಡೀ ಕ್ರೀಡಾಂಗಣವನ್ನು ಒದ್ದೆ ಮಾಡಿದ ಪರಿಣಾಮ ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ಜಯ ಘೋಷಿಸಲಾಯಿತು.
ಇನ್ನು ಸರಣಿಯ ಎರಡನೇ ಪಂದ್ಯ ಭಾನುವಾರ ಹೂವ್ನ ಕೌಂಟಿ ಗ್ರೌಂಡ್ನಲ್ಲಿ ನಡೆಯಲಿದೆ. (ಏಜೆನ್ಸೀಸ್)