ನವದೆಹಲಿ: ಆಲ್ರೌಂಡರ್ ಆಟಗಾರ ಆಂಡ್ರೆ ರೆಸೆಲ್ ವಿಚಿತ್ರವಾಗಿ ರನೌಟ್ ಆದ ಪ್ರಸಂಗಕ್ಕೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಸಾಕ್ಷಿಯಾಗಿದೆ. ಹೀಗೂ ಕೂಡ ಔಟ್ ಆಗಬಹುದು ಎಂದು ಎಚ್ಚೆತ್ತುಕೊಳ್ಳಲು ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳಿಗೂ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.
ವಿಂಡೀಸ್ ದಾಂಡಿದ ಆಂಡ್ರೆ ರೆಸೆಲ್. ಸದ್ಯ ಬಿಪಿಎಲ್ನಲ್ಲಿ ಮಿನಿಸ್ಟರ್ ಗ್ರೂಪ್ ಢಾಕಾ (ಎಂಎಸ್ಡಿ) ಪರ ಆಡುತ್ತಿದ್ದಾರೆ. ಖುಲ್ನಾ ಟೈಗರ್ಸ್ (ಕೆಟಿ) ವಿರುದ್ಧ ನಿನ್ನೆ (ಜ.21) ನಡೆದ ಪಂದ್ಯದ ವೇಳೆ ಈ ವಿಚಿತ್ರ ರನೌಟ್ ಪ್ರಸಂಗ ಜರುಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
15ನೇ ಓವರ್ನಲ್ಲಿ ತಿಸರಾ ಪೆರೆರಾ ಎಸೆದ ಚೆಂಡನ್ನು ಸ್ಟ್ರೈಕರ್ ವಿಭಾಗದಲ್ಲಿದ್ದ ರೆಸೆಲ್, ಥರ್ಡ್ ಮ್ಯಾನ್ ಕಡೆಗೆ ಬಾರಿಸಿದರು. ಬಳಿಕ ಸಿಂಗಲ್ ರನ್ ಕದಿಯಲು ಯತ್ನಿಸಿದರು. ನಾನ್ಸ್ಟ್ರೈಕರ್ ವಿಭಾಗದಲ್ಲಿದ್ದ ಮಹಮ್ಮದುಲ್ಲ ಅವರು ಸ್ಟ್ರೇಕರ್ ವಿಭಾಗದ ಕಡೆಗೆ ಓಡಿ ಬರುವಾಗ ಕ್ಷೇತ್ರ ರಕ್ಷಕ ಎಸೆದ ಚೆಂಡು ನೇರವಾಗಿ ವಿಕೆಟ್ ಬಡಿಯಿತು. ಆದರೆ, ಅಷ್ಟರಲ್ಲಾಗಲೇ ಮಹಮ್ಮದುಲ್ಲ ಕ್ರೀಸ್ ದಾಟಿದ್ದರು.
ಆದರೆ, ಚೆಂಡ್ ಸ್ಟ್ರೈಕರ್ ವಿಭಾಗದ ವಿಕೆಟ್ಗೆ ಬಿದ್ದು ನಾನ್ಸ್ಟ್ರೈಕರ್ ವಿಭಾಗದಲ್ಲಿದ್ದ ವಿಕೆಟ್ಗೆ ಮತ್ತೆ ಬಡಿಯಿತು. ಆದರೆ, ಆಂಡ್ರೆ ರೆಸೆಲ್ ಇನ್ನು ಕ್ರೀಸ್ ತಲುಪೇ ಇರಲಿಲ್ಲ. ಚೆಂಡು ಈ ಕಡೆ ಬರುವುದಿಲ್ಲ ಎಂದು ನಿಧಾನಗತಿಯಲ್ಲಿ ಓಡುತ್ತಿದ್ದ ರೆಸೆಲ್ಗೆ ಶಾಕ್ ಆಯಿತು. ಅಲ್ಲಿವರೆಗೆ ಕೇವಲ 7 ರನ್ ಗಳಿಸಿದ್ದ ರಸೆಲ್ ಅನಿರೀಕ್ಷಿತ ಔಟ್ನಿಂದಾಗಿ ಪೆವಲಿಯನ್ ಸೇರಬೇಕಾಯಿತು.
ಅಂತಿಮವಾಗಿ ಈ ಪಂದ್ಯ ಕೆಟಿ ಪಾಲಾಯಿತು. ಐದು ವಿಕೆಟ್ಗಳ ಜಯ ಸಾಧಿಸಿದರು. ಮೊದಲು ಬ್ಯಾಟ್ ಮಾಡಿದ ಎಂಎಸ್ಡಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಕೆಟಿ 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕುವ ಮೂಲಕ ಅಮೋಘ ಜಯ ಸಾಧಿಸಿತು. (ಏಜೆನ್ಸೀಸ್)