More

    ಹಾಲಿಗೆ ರಾಸಾಯನಿಕ ಮಿಶ್ರಣ ದಂಧೆಗೆ ಮಾಸ್ಟರ್ ಪ್ಲ್ಯಾನ್​: ಡೇರಿಯಲ್ಲಿ ಬೇಕಾದ ಸಿಬ್ಬಂದಿ ನೇಮಕ; ಅನುಮಾನ ಸೃಷ್ಟಿಸಿದ ಪ್ರಕರಣ!

    | ಎಂ.ಪಿ.ವೆಂಕಟೇಶ್ ಮದ್ದೂರು

    ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್​ವುುಲ್)ಕ್ಕೆ ಸೇರಿದ ತಾಲೂಕಿನ ಕೆ.ಹೊನ್ನಲಗೆರೆ ಡೇರಿಯಲ್ಲಿ ಹಾಲಿಗೆ ರಾಸಾಯನಿಕ ಮಿಶ್ರಣ ದಂಧೆಯ ಹಿಂದೆ ಕೆಲವರು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿರುವುದು ಒಂದೊಂದಾಗಿ ಹೊರಗೆ ಬರುತ್ತಿದೆ. ಒಕ್ಕೂಟದ ಅಧಿಕಾರಿಗಳೇ ಅಕ್ರಮ ಪತ್ತೆ ಮಾಡಿ ಡೇರಿಯಿಂದ ಹಾಲು ಸ್ಥಗಿತಗೊಳಿಸಿರುವ ಕ್ರಮ ಒಂದೆಡೆಯಾದರೆ, ಜ.17ರಂದೇ ಆದೇಶ ಹೊರಡಿಸಿದ್ದರೂ ಪ್ರಕರಣ ಬೆಳಕಿಗೆ ಬರುವವರೆಗೂ ಯಾರ ವಿರುದ್ಧವೂ ದೂರು ದಾಖಲಾಗಿಲ್ಲದಿರುವುದು ಅನುಮಾನ ಹುಟ್ಟುಹಾಕಿದೆ. ದಂಧೆ ಹಿಂದೆ ಯಾರ ಕೈವಾಡವಿದೆ ಎನ್ನುವ ಮಾಹಿತಿ ಹೊರಗೆ ಬಾರದಂತೆ ನೋಡಿಕೊಳ್ಳಲು ಈ ರೀತಿ ಮಾಡಿರಬಹುದೆಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

    ದಂಧೆ ಹಿಂದಿರುವವರು ಯಾರು?: ದಂಧೆ ಬಗ್ಗೆ ಒಬ್ಬೊಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಇದ್ದ ಮೂವರ ಪೈಕಿ ಕದ್ದವರು ಯಾರು’ ಎನ್ನುವಂತಾಗಿದೆ. ಇನ್ನು ದಂಧೆ ನಡೆಸುತ್ತಿದ್ದವರು ಪ್ರಭಾವಿಗಳಾಗಿರಬಹುದು. ಇವರಿಗೆ ರಾಜಕೀಯ ವಲಯದಲ್ಲಿ ಸಾಥ್ ನೀಡುವವರಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದಲ್ಲದೆ, ರಾಸಾಯನಿಕ ಮಿಶ್ರಣ ಬಗ್ಗೆ ಒಕ್ಕೂಟದಿಂದ ನೋಟಿಸ್ ನೀಡಿದ್ದರೂ ಆಡಳಿತ ಮಂಡಳಿ ನಿರ್ದೇಶಕರಿಗೆ ಮಾಹಿತಿ ನೀಡಿಲ್ಲ. ಹಾಲು ಸಂಗ್ರಹ ನಿಲ್ಲಿಸಿದ ಬಳಿಕವಷ್ಟೇ ಎಲ್ಲರಿಗೂ ಗೊತ್ತಾಗಿದೆ. ‘ವಿಜಯವಾಣಿ’ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ, ಜನರು ಹಲವು ಮಾಹಿತಿ ನೀಡಿದ್ದಾರೆ. ಡೇರಿ ಸಮೀಪ ರಾತ್ರೋರಾತ್ರಿ ವಾಹನಗಳು ಓಡಾಡುತ್ತಿದ್ದವು. ಪ್ರತಿ ತಿಂಗಳು ಸರಿಯಾಗಿ ರೈತರಿಗೆ ಹಣವನ್ನೂ ನೀಡುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ದರ್ಪದ ಉತ್ತರ ಬರುತ್ತಿತ್ತು. ಒಕ್ಕೂಟದ ಪ್ರಮುಖ ಮಾಹಿತಿಯನ್ನು ಸರಿಯಾಗಿ ಹಂಚಿಕೊಳ್ಳುತ್ತಿರಲಿಲ್ಲ. ತಮಗೆ ಬೇಕಾದ ಸಿಬ್ಬಂದಿಯನ್ನೇ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆನ್ನುವ ಸಂಗತಿ ಹೊರಹಾಕಿದರು.

    ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಸಾಯನಿಕ ಮಿಶ್ರಣ ಪ್ರಕರಣ ಸಂಬಂಧ ಮದ್ದೂರು ಪೊಲೀಸರಿಗೆ ದೂರು ನೀಡಲಾಗಿದೆ. ಹಾಲಿನ ಕಲಬೆರಕೆ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳಲಿಲ್ಲ.

    | ಬಿ.ಆರ್.ರಾಮಚಂದ್ರು ಮನ್​ಮುಲ್​ ಅಧ್ಯಕ್ಷ

    ಅಪಪ್ರಚಾರ ಬೇಡ: ಹಗರಣ ಹೊರಬಂದ ಹಿನ್ನೆಲೆಯಲ್ಲಿ ಮನ್​ವುುಲ್​ಗೆ ಕೆಎಂಎಫ್ ನಿಯೋಗ ಶುಕ್ರವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಈವರೆಗೆ ನಡೆದಿರುವ ಬೆಳವಣಿಗೆ ಬಗ್ಗೆ ಮನ್​ವುುಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ರೈತರ ಸಂಸ್ಥೆ ಆಗಿರುವುದರಿಂದ ಅಪಪ್ರಚಾರ ಮಾಡಬೇಡಿ. ಕಳಪೆ ಹಾಲು ಒಕ್ಕೂಟಕ್ಕೆ ಬರುತ್ತಿದ್ದಂತೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಸಂಘದಲ್ಲೇ ಕಳಪೆ ಹಾಲು ತಿರಸ್ಕಾರ

    ಬೆಂಗಳೂರು: ಹಾಲಿಗೆ ಸಕ್ಕರೆಯಂತಹ ಪದಾರ್ಥ ಗಳನ್ನು ಕಲಬೆರಕೆ ಮಾಡುತ್ತಿದ್ದ ಬಗ್ಗೆ ದೂರು ಬಂದ ಕೂಡಲೆ ಅಲ್ಲಿ ತಪಾಸಣೆ ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಹಂತದಲ್ಲಿಯೇ ಹಾಲನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ತಿಳಿಸಿದ್ದಾರೆ. ಹಾಲಿನಲ್ಲಿ ರಾಸಾಯನಿಕ ಕಲಬೆರಕೆ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ಕೆ.ಹೊನ್ನಲಗೆರೆ ಡೇರಿಯಲ್ಲಿ ಪ್ರಕರಣ ಬೆಳಕಿಗೆ ಬಂದ ಕೂಡಲೆ ಅಲ್ಲಿ ಹಾಲು ಸಂಗ್ರಹ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ 14 ಡೈರಿಗಳಿಂದ 25 ಲಕ್ಷಕ್ಕೂ ಹೆಚ್ಚು ರೈತರು ನಿತ್ಯ 14,500 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ದಿನಕ್ಕೆ 2 ಬಾರಿ ಹಾಲು ಹಾಕುತ್ತಿದ್ದಾರೆ. ಹಾಲು ಸಂಗ್ರಹ ಸಂದರ್ಭದಲ್ಲಿಯೇ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ಕಳೆದ 4 ದಶಕ ಗಳಿಂದಲೂ ಇದೇ ಮಾದರಿಯಲ್ಲಿ ಹಾಲು ಸಂಗ್ರಹ ಮಾಡುತ್ತಿದ್ದು, ಗುಣಮಟ್ಟಕ್ಕೆ ಕೆಎಂಎಫ್ ಹೆಸರುವಾಸಿ ಯಾಗಿದೆ ಎಂದು ಸತೀಶ್ ವಿವರಣೆ ನೀಡಿದ್ದಾರೆ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ತಾಯಿ, ಅಕ್ಕ, ಸೋದರಳಿಯ ಒಗ್ಗೂಡಿ ಬರ್ಬರವಾಗಿ ಕೊಂದರು; ಹಾಗಾದರೆ ಆತ ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts