ಕ್ರೀಡೆ

ಅದು ಸಾಧ್ಯವಿಲ್ಲ ಅಂದುಕೊಂಡಾಗ ಮಾತ್ರ ಗುಡ್​ಬೈ ಹೇಳುತ್ತೇನೆ! ನಿವೃತ್ತಿ ಬಗ್ಗೆ ಆರ್​. ಅಶ್ವಿನ್​ ಸ್ಫೋಟಕ ಹೇಳಿಕೆ

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಭವಿಷ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಇನ್ಮುಂದೆ ಆಟದಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ ಅಂದುಕೊಂಡಾಗ ಮಾತ್ರ ನಿವೃತ್ತಿಯ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದಾರೆ.

ವಿಮಲ್​ ಕುಮಾರ್​ ಎಂಬುವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನ್​, ನನ್ನ ಮನಸ್ಸಿನಲ್ಲಿ ನಿವೃತ್ತಿಯ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸದ್ಯಕ್ಕೆ ಪ್ರಸ್ತುತ ದಿನದ ಬಗ್ಗೆ ಮಾತ್ರ ಯೋಚಿಸುತ್ತೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಂಡದಲ್ಲಿ ಶ್ರಮಿಸಿದ್ದೇನೆ. ನಾನಿನ್ನೂ ನಿವೃತ್ತಿಯ ಬಗ್ಗೆ ನಿರ್ಧರಿಸಿಲ್ಲ. ಆದರೆ, ಯಾವಾಗ ಆಟದಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತೇನೋ ಅಂದೇ ನಾನು ನಿವೃತ್ತಿಯಾಗುತ್ತೇನೆ. ಸದ್ಯ ದಿನಾಂಕವನ್ನು ಇನ್ನು ನಿರ್ಧರಿಸಿಲ್ಲ ಎಂದರು.

ಮುಂದುವರಿದು ಮಾತನಾಡಿದ ಅಶ್ವಿನ್​, ನಾನು ನನಗಾಗಿ ಯಾವುದೇ ಗುರಿಯನ್ನು ಇಟ್ಟುಕೊಂಡಿಲ್ಲ. ನಾನು ಅನಿಲ್ ಭಾಯ್ ಅವರ ದಾಖಲೆಯನ್ನು ಮುರಿಯಲು ಬಯಸುತ್ತೇನೆ. ಸದ್ಯ ನಾನು ಪ್ರತಿದಿನ ಸಂತೋಷದಿಂದ ಬದುಕುತ್ತಿದ್ದೇನೆ. ನನ್ನ ಆಟದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಯಸುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.

ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಅಶ್ವಿನ್ ಅಗ್ರಸ್ಥಾನದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಟೀಮ್​ ಇಂಡಿಯಾ ಐದು ಟೆಸ್ಟ್‌ಗಳನ್ನು ಆಡಲಿದ್ದು, ಆರ್​. ಅಶ್ವಿನ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳ ಸರಣಿ ನಡೆಯಲಿದೆ.

ಅಶ್ವಿನ್ ಅವರು 100 ಟೆಸ್ಟ್ ಪಂದ್ಯಗಳಲ್ಲಿ 516 ವಿಕೆಟ್ ಗಳಿಸುವ ಮೂಲಕ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 619 ವಿಕೆಟ್‌ಗಳನ್ನು ಪಡೆದಿರುವ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)