ಕ್ರೀಡೆ

ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ವಾರ್ನರ್​ ಕಾಲೆಳೆದ ಅಶ್ವಿನ್​!

ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಲಾಕ್​ಡೌನ್​ ಸಮಯದಲ್ಲಿ ವಿವಿಧ ಟಿಕ್​ಟಾಕ್​ ವಿಡಿಯೋಗಳ ಮೂಲಕ ಭಾರತೀಯ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಆದರೆ ಭಾರತ ಸರ್ಕಾರ ಸೋಮವಾರ ಚೀನಾದ 59 ಆ್ಯಪ್​ಗಳ ಜತೆಗೆ ಟಿಕ್​ಟಾಕ್​ ಅನ್ನೂ ನಿಷೇಧಿಸಿದೆ. ಇದಕ್ಕಾಗಿ ಡೇವಿಡ್​ ವಾರ್ನರ್​ ಅವರನ್ನು ಭಾರತದ ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್​ ಕಿಚಾಯಿಸಿದ್ದಾರೆ.

ಸರ್ಕಾರ ಟಿಕ್​ಟಾಕ್​ ಆ್ಯಪ್​ ನಿಷೇಧಿಸಿರುವ ಬಗೆಗಿನ ಸುದ್ದಿಯನ್ನು ಪರ್ತಕತ್ರೆಯೊಬ್ಬರು ಟ್ವೀಟಿಸಿರುವುದಕ್ಕೆ ಪ್ರತಿಯಾಗಿ ಅಶ್ವಿನ್, 'ಅಪ್ಪೋ ಅನ್ವರ್​?' ಎಂದು ಟ್ವೀಟಿಸಿ ಡೇವಿಡ್​ ವಾರ್ನರ್​ರನ್ನು ಟ್ಯಾಗ್​ ಮಾಡಿದ್ದಾರೆ. ಇದು ​ಸೂಪರ್​​ಸ್ಟಾರ್​ ರಜನಿಕಾಂತ್​ ಅವರ 'ಬಾಷಾ' ಸಿನಿಮಾದ ಜನಪ್ರಿಯ ಡೈಲಾಗ್​ ಆಗಿದೆ. ವಾರ್ನರ್​ ಈಗೇನು ಮಾಡುವರು ಎಂಬುದು ಇದರ ಅರ್ಥವಾಗಿದೆ.

ಲಾಕ್​ಡೌನ್​ ಸಮಯದಲ್ಲಿ ಆಸ್ಟ್ರೇಲಿಯಾದ ಮನೆಯಿಂದಲೇ ಪತ್ನಿ ಮತ್ತು ಮಕ್ಕಳ ಜತೆಗೂಡಿ ವಿವಿಧ ತಮಿಳು, ತೆಲುಗು, ಹಿಂದಿ ಹಾಡುಗಳಿಗೆ ನರ್ತಿಸಿ ಟಿಕ್​ಟಾಕ್​ ವಿಡಿಯೋ ಮಾಡುತ್ತಿರುವ ಡೇವಿಡ್​ ವಾರ್ನರ್​ಗೆ ಭಾರತೀಯ ಅಭಿಮಾನಿಗಳಿಂದಲೇ ಹೆಚ್ಚಿನ ಮೆಚ್ಚುಗೆ ಲಭಿಸಿದೆ.