ಕ್ರೀಡೆ

ಆರು ವಿಕೆಟ್​ ಪಡೆದು ದಿಗ್ಗಜನ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದ ಅಶ್ವಿನ್​; ಮೊದಲ ಟೆಸ್ಟ್​ನಲ್ಲಿ ಮಾಡಿದ ಸಾಧನೆಗಳಿವು

Webdesk - Manjunatha B

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಮೂಲಕ ಆತಿಥೇಯರು ಪ್ರವಾಸಿ ತಂಡದ ಎದುರು ಸಂಪೂರ್ಣ ಮೇಲುಗೈ ಸಾಧಿಸುವ ಮೂಲಕ 280 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇನ್ನೂ ದ್ವತೀಯ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್. ಅಶ್ವಿನ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.

ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಅಶ್ವಿನ್​ ವಿಕೆಟ್​ ಪಡೆಯುವಲ್ಲಿ ವಿಫಲರಾಗಿದ್ದರು. ದ್ವಿತೀಯ ಇನ್ನಿಂಗ್ಸ್​ನಲ್ಲಿ 21 ಓವರ್​ಗಳನ್ನು ಎಸೆದ ಅಶ್ವಿನ್​ 88 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ. ಈ 6 ವಿಕೆಟ್​ಗಳನ್ನು ಪಡೆಯುವ ಮೂಲಕ ಅಶ್ವಿನ್​ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ದಿಗ್ಗಜ ಆಟಗಾರ, ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್​ ಪಡೆದ ಸಾಧನೆ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ದಿಗ್ಗಜ ಆಟಗಾರ ಶೇನ್​ ವಾರ್ನ್​ ಅವರ ಹೆಸರಿನಲ್ಲಿತ್ತು. 145 ಟೆಸ್ಟ್ ಪಂದ್ಯಗಳ 273 ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ವಾರ್ನ್ ಒಟ್ಟು 37 ಬಾರಿ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೆಸ್ಟ್​ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಬಾಂಗ್ಲಾ ವಿರುದ್ದ 6 ವಿಕೆಟ್ ಕಬಳಿಸಿ ಅಶ್ವಿನ್ ವಾರ್ನ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. 101 ಟೆಸ್ಟ್ ಪಂದ್ಯಗಳ 191 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ 37 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ ಅತ್ಯಧಿಕ ಬಾರಿ ಐದು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ಸಾಲಿನಲ್ಲಿ ಶ್ರೀಲಂಕಾ ತಂಡದ ದಿಗ್ಗಜ ಆಟಗಾರ ಮುತ್ತಯ್ಯ ಮುರಳಿಧರನ್​ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 67 ಬಾರಿ ಐದು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಇದಲ್ಲದೆ ಭಾರತದ ಪರ ಟೆಸ್ಟ್​​ ಕ್ರಿಕೆಟ್​ನಲ್ಲಿ ಅನೇಕ ದಾಖಲೆಗಳನ್ನು ಆರ್​. ಅಶ್ವಿನ್​ ತಮ್ಮದಾಗಿಸಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಟೆಸ್ಟ್‌ನಲ್ಲಿ ಒಟ್ಟು 522 ವಿಕೆಟ್ ಕಬಳಿಸಿದ್ದಾರೆ. ಇದು ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ. ಭಾರತಕ್ಕಾಗಿ ಅತಿ ಹೆಚ್ಚು 5-ವಿಕೆಟ್ ಸೇರಿದಂತೆ ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.