ಮುಂಬೈ: ಪಿವಿ ಸಿಂಧು ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಧ್ರುವತಾರೆಯಾಗಿ ಮಿಂಚುತ್ತಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಇದುವರೆಗೂ 5 ಪದಕ (1 ಸ್ವರ್ಣ, ತಲಾ 2 ಬೆಳ್ಳಿ, ಕಂಚು) ಜಯಿಸಿರುವ ಸಿಂಧು, ಭಾರತೀಯರ ಮಟ್ಟಿಗೆ ಇದು ದಾಖಲೆಯಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಜಯಿಸಲು ಆರಂಭಿಸಿದ ಹೈದರಾಬಾದ್ನ 25 ವರ್ಷದ ಆಟಗಾರ್ತಿಗೆ 2012ರ ಚೀನಾ ಓಪನ್ನಲ್ಲಿ ಸಿಕ್ಕ ಒಂದು ಗೆಲುವೇ ವೃತ್ತಿಜೀವನಕ್ಕೆ ತಿರುವು ನೀಡಿತ್ತಂತೆ.
ಮಹಿಳಾ ಬ್ಯಾಡ್ಮಿಂಟನ್ ಅಂದರೆ ಕೇವಲ ಚೀನಾ ಆಟಗಾತಿರ್ಯರದ್ದೇ ಪ್ರಭುತ್ವ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಕೇವಲ ಬೆಳ್ಳಿ, ಕಂಚಿಗಷ್ಟೇ ಇತರ ದೇಶದ ಆಟಗಾರ್ತಿಯರು ತೃಪ್ತಿಪಟ್ಟುಕೊಳ್ಳುತ್ತಿದ್ದರು. ಈ ವೇಳೆ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಹೆಸರು ತಂದುಕೊಟ್ಟವರು ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು. 2012ರ ಒಲಿಂಪಿಕ್ ಚಾಂಪಿಯನ್ ಚೀನಾದ ಲೀ ಕ್ಸೂರೈ ಎದುರು ತಮ್ಮ 16ನೇ ವಯಸ್ಸಿನಲ್ಲೇ ಮಣಿಸಿ ಭರವಸೆ ಮೂಡಿಸಿದವರು ಪಿವಿ ಸಿಂಧು. ಸ್ವತಃ ಸಿಂಧು ಹೇಳಿಕೊಂಡಂತೆ ಅಂದು ಚೀನಾ ಆಟಗಾರ್ತಿ ಎದುರು ಸಾಧಿಸಿದ ಗೆಲುವು ವೃತ್ತಿಜೀವನನ್ನೇ ಬದಲಿಸಿದಂತೆ. ಮರು ವರ್ಷ ಪ್ರತಿಷ್ಠಿತ ವಿಶ್ವಚಾಂಪಿಯನ್ನಲ್ಲಿ ಮೊದಲ ಬಾರಿಗೆ ಕಂಚು ಗೆದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಅಂತಾರಾಷ್ಟ್ರೀಯ ಟೂರ್ನಿ ಆಡಲು ಆರಂಭಿಸಿದಾಗ ಸಾಕಷ್ಟು ಸೋಲುಗಳು ಎದುರಾದವು. ಮೊದಲ ಸುತ್ತಿನಲ್ಲೇ ಸೋಲುವುದು, ಇಲ್ಲವಾದರೆ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸುತ್ತಿದೆ. ಈ ಸೋಲುಗಳಿಂದ ಅಂತಾರಾಷ್ಟ್ರೀಯ ಗುಣಮಟ್ಟ ಅರಿತುಕೊಂಡೆ, ಅದರಲ್ಲೂ 2012ರಲ್ಲಿ ಚೀನಾ ಓಪನ್ನಲ್ಲಿ ಅಂದಿನ ಒಲಿಂಪಿಕ್ ಚಾಂಪಿಯನ್ ಅವರನ್ನು ಸೋಲಿಸಿದ್ದೇ ನನಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಎಂದು ಹೇಳಿದ್ದಾರೆ.
ಇಂಡೋನೇಷ್ಯಾದ ತೌಫಿಕ್ ಹಿದಾಯತ್ ಅವರ ಬ್ಯಾಕ್ಹ್ಯಾಂಡ್ ಸ್ಟೈಲ್ ಹಾಗೂ ಚೀನಾದ ಲಿನ್ ಡ್ಯಾನ್ ಆಟದ ಶೈಲಿ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಲಾಕ್ಡೌನ್ನಿಂದಾಗಿ ಬ್ಯಾಡ್ಮಿಂಟನ್ನಿಂದ ದೂರ ಉಳಿದಿರುವ ಸಿಂಧು, ಸದ್ಯ ಮನೆಯಲ್ಲೇ ಫಿಟ್ನೆಸ್ ಕಾಯ್ದುಕೊಳ್ಳಲು ದೈಹಿಕ ಕಸರತ್ತು ಕೈಗೊಂಡಿದ್ದಾರೆ. ವಿಶ್ವ ನಂ.7 ಪಿವಿ ಸಿಂಧು, ಕಳೆದ ವರ್ಷ ಸ್ವಿಜರ್ಲೆಂಡ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಗೆದ್ದಿದ್ದರು.