ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತ ಸಿಂಧು ಅವರು ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 88 ನಿಮಿಷಗಳ ಕಾಲ ನಡೆದ ಜಿದ್ದಾ-ಜಿದ್ದಿ ಹೋರಾಟದಲ್ಲಿ ವಿಶ್ವದ 20ನೇ ಶ್ರೇಯಾಂಕಿತ ಬುಸಾನನ್ ವಿರುದ್ಧ 13-21 21-16 21-12 ಅಂಕಗಳೊಂದಿಗೆ ಗೆಲುವು ಸಾಧಿಸಿ ಮೈಲುಗಲ್ಲು ಸಾಧಿಸಿದ್ದಾರೆ.
55 ನಿಮಿಷಗಳ ಜಿದ್ದಾಜಿದ್ದಿನ ಹೋರಾಟದ ಅಂತ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು ಗೆಲುವಿನ ನಗೆ ಬೀರಿದ್ದಾರೆ. ಕಳೆದು ತಿಂಗಳು ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಹಾನ್ ಯುವೆ ವಿರುದ್ಧ ಸಿಂಧು ಪರಾಭವಗೊಂಡಿದ್ದರು. ಈಗ ಸೇಡು ತೀರಿಸಿಕೊಂಡಿದ್ದಾರೆ.
ಇದು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ ಸಿಂಧು ಅವರ ವೃತ್ತಿಜೀವನದ ನಾಲ್ಕನೇ ಫೈನಲ್ ಆಗಿದೆ. ಇದೀಗ ಸಿಂಧು ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್ ಕ್ಸಿ ಯಿ ಅವರನ್ನು ಎದುರಿಸಬೇಕಾಗಿದೆ.
15ನೇ ಶ್ರೇಯಾಂಕದ ಆಟಗಾರ್ತಿ ಪಿವಿ ಸಿಂಧುಗೆ ಈ ಗೆಲುವು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಜರ್ಮನಿಯಲ್ಲಿ ತಯಾರಿ ನಡೆಸಲು ಭಾರತೀಯ ಕ್ರೀಡಾ ಸಚಿವಾಲಯ ಇತ್ತೀಚೆಗೆ ಸಿಂಧುಗೆ ಅನುಮೋದನೆ ನೀಡಿತ್ತು.