ವಂತಾ (ಫಿನ್ಲೆಂಡ್): ಪ್ಯಾರಿಸ್ ಒಲಿಂಪಿಕ್ಸ್ ನಿರಾಸೆಯ ಬಳಿಕ ಮೊದಲ ಬಾರಿ ಕಣಕ್ಕಿಳಿದ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಮೊದಲ ಪಂದ್ಯದಲ್ಲೇ ಆಘಾತ ಎದುರಿಸಿದ್ದಾರೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ತರಬೇತಿ ಬಳಗದ ಬದಲಾವಣೆಯ ನಡುವೆಯೂ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಮಂಗಳವಾರ ಆರಂಭಗೊಂಡ ಆರ್ಕ್ಟಿಕ್ ಓಪನ್-500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನ ಆರಂಭಿಕ ಪಂದ್ಯದಲ್ಲಿ ವಿಶ್ವ ನಂ.16 ಸಿಂಧು 16-21, 10-21 ನೇರ ಗೇಮ್ಗಳಿಂದ ವಿಶ್ವ ನಂ.32 ಕೆನಡಾ ಮಿಚೆಲ್ ಲೀ ಎದುರು ಮುಗ್ಗರಿಸಿದರು. ಒಲಿಂಪಿಕ್ಸ್ ನಂತರದ ಎರಡು ತಿಂಗಳ ವಿಶ್ರಾಂತಿ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ನೀರಸ ಆಟ ತೋರಿದ ಸಿಂಧು 37 ನಿಮಿಷಗಳಲ್ಲಿ ತನಗಿಂತ ಕೆಳಶ್ರೇಯಾಂಕಿತೆ ಆಟಗಾರ್ತಿಯ ಎದುರು ಸೋಲೊಪ್ಪಿಕೊಂಡರು. ಉಳಿದಂತೆ ಭಾರತದ ಉದಯೋನ್ಮುಖ ಷಟ್ಲರ್ಗಳಾದ ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್ ಮತ್ತು ಕಿರಣ್ ಜಾರ್ಜ್ ಶುಭಾರಂಭ ಕಂಡಿದ್ದಾರೆ.
23 ವರ್ಷದ ಮಾಳವಿಕಾ ಬನ್ಸೋಡ್ 21-19, 24-22 ನೇರ ಗೇಮ್ಗಳಿಂದ ವಿಶ್ವ ನಂ.23, ಚೀನಾ ತೈಪೆಯ ಸುಂಗ್ ಶುವೋ ಯುನ್ ಯೂ ಎದುರು ಹೋರಾಟಯುತ ಗೆಲುವು ದಾಖಲಿಸಿದರು. 57 ನಿಮಿಷ ನಡೆದ ಹೋರಾಟದಲ್ಲಿ ಮಾಳವಿಕಾ ಮೇಲುಗೈ ಸಾಧಿಸಿದರು. ಆಕರ್ಷಿ ಕಶ್ಯಪ್ ಜರ್ಮನಿಯ ಯೆವೊನ್ ಲಿ ವಿರುದ್ಧ 21-19, 21-14ರಿಂದ ಗೆದ್ದರು. ಪುರುಷರ ಸಿಂಗಲ್ಸ್ನಲ್ಲಿ ಕಿರಣ್ ಜಾರ್ಜ್ 21-16, 13-21, 21-19 ರಿಂದ ಫ್ರಾನ್ಸ್ನ ಲೂಕಾಸ್ ಕ್ಯಾಲೆರ್ಬೌಟ್ ಅವರನ್ನು ಪರಾಭವಗೊಳಿಸಿದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದ ಲಕ್ಷ್ಯ ಸೇನ್ ಬುಧವಾರ ತನ್ನ ಅಭಿಯಾನ ಆರಂಭಿಸಲಿದ್ದಾರೆ.