ಕ್ರೀಡೆ

ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು!

ಪುಣೆ: ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ತನ್ನ ಖಾಸಗಿ ಭಾಗಕ್ಕೆ ಬಡಿದು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬ್ಯಾಟರ್ ಬಾಲನ್ನು ನೇರವಾಗಿ ತನ್ನತ್ತ ಹೊಡೆದಾಗ ಶೌರ್ಯ ಎಂಬ ಬಾಲಕ ಬೌಲಿಂಗ್ ಮಾಡುತ್ತಿದ್ದ. ವೇಗವಾಗಿ ಬಂದ ಚೆಂಡು ಶೌರ್ಯನ ಮರ್ಮಾಂಗಕ್ಕೆ ಬಡಿದಿದ್ದರಿಂದ, ಆತ ಮೈದಾನದಲ್ಲೇ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕೂಡಲೇ ಸ್ನೇಹಿತರು ಬಂದು ಶೌರ್ಯನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಶೌರ್ಯ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹನ್ನೊಂದು ವರ್ಷದ ಶೌರ್ಯ ಕ್ರಿಕೆಟ್‌ನಲ್ಲಿ ಕಠಿಣ ಅಭ್ಯಾಸ ಮಾಡಿ ಉತ್ತಮ ಕ್ರಿಕೆಟರ್ ಆಗುವ ಕನಸು ಕಂಡಿದ್ದ. ಆದರೆ ಆಕಸ್ಮಿಕವಾಗಿ ಸಂಭವಿಸಿದ ಘಟನೆಯಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.