ಕ್ರೀಡೆ

ಅಮ್ಮ ಕ್ರೀಡಾತಾರೆ, ಮಗ ಕ್ರೀಡಾ ವೈದ್ಯ

ಬೆಂಗಳೂರು: ಆಕೆ ಕೂದಲೆಳೆ ಅಂತರದಲ್ಲಿ ಒಲಿಂಪಿಕ್ ಪದಕ ತಪ್ಪಿಸಿಕೊಂಡರೂ ಭಾರತೀಯ ಕ್ರೀಡಾ ಕ್ಷೇತ್ರದ ಹೆಮ್ಮೆಯ ಮಗಳು. ಯುವ ಅಥ್ಲೀಟ್‌ಗಳ ಪಾಲಿಗಂತೂ ಈಕೆಯೇ ಮಾದರಿ. ಭಾರತದ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಇವರ ಹೆಸರು ಕೇಳದವರಿಲ್ಲ. 80ರ ದಶಕದಲ್ಲಿ ಭಾರತೀಯ ಅಥ್ಲೀಟ್ ಕ್ಷೇತ್ರದಲ್ಲಿ ಮಿಂಚಿದ ಪಿಟಿ ಉಷಾ ಹೆಸರು ಇಂದಿಗೂ ಚಾಲ್ತಿಯಲ್ಲಿದೆ. ಸ್ಟಾರ್ ಕ್ರೀಡಾಪಟುಗಳ ಮಕ್ಕಳು ಪಾಲಕರ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ತೀರಾ ಕಡಿಮೆ. ಇದು ಪಿಟಿ ಉಷಾ ವಿಷಯದಲೂ ಹೊರತಾಗಿಲ್ಲ. ಆದರೆ, ಉಷಾ ಅವರ ಮಗ ವಿಭಿನ್ನವಾಗಿ ಕಾಣುತ್ತಾನೆ. ತಾಯಿ ಮಿಂಚಿದ ಕ್ಷೇತ್ರದಲ್ಲಿಯೇ ಸೇವೆ ಸಲ್ಲಿಸುವ ಸಲುವಾಗಿ ಕ್ರೀಡಾ ವಿಜ್ಞಾನದಲ್ಲಿ ಡಿಪ್ಲೊಮಾ ಪದವಿಗಳಿಸುವ ಮೂಲಕ ತಾಯಿಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ.

ಸ್ಟಾರ್ ಅಥ್ಲೀಟ್ ಪಿಟಿ ಉಷಾ ಅವರ ಪುತ್ರ ಡಾ.ವಿಘ್ನೇಶ್​ ವೆಂಗಾಲಿಲ್ ಉಜ್ವಲ್, ಸ್ವಿಜರ್ಲೆಂಡ್‌ನ ಲೌಸನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ (ಐಒಸಿ) ಕ್ರೀಡಾ ವೈದ್ಯಕೀಯ ವಿಷಯದಲ್ಲಿ ಡಿಪ್ಲೊಮಾ ಪದವಿ ಗಿಟ್ಟಿಸಿಕೊಂಡಿದ್ದಾರೆ. ಅತ್ಯುನ್ನತ ದರ್ಜೆಯಲ್ಲಿ ಈ ಪದವಿ ಪೂರೈಸಿರುವ ಉಷಾ ಅವರ ಮಗ, ಇದೀಗ ತಾಯಿ ಮಿಂಚಿದ ಕ್ಷೇತ್ರಕ್ಕೆ ಮರಳಲು ಸಿದ್ಧವಾಗಿದ್ದಾನೆ. ಈ ಕುರಿತು ಪಿಟಿ ಉಷಾ ಅವರೇ ಟ್ವಿಟರ್‌ನಲ್ಲಿ ತಮ್ಮ ಮಗನ ಸಾಧನೆ ಕುರಿತು ಪ್ರಕಟಿಸಿದ್ದಾರೆ. ‘ನನ್ನ ಹೆಮ್ಮೆಯ ಮಗ ಕ್ರೀಡಾ ವೈದ್ಯಕೀಯದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಡಿಪ್ಲೊಮಾ ಪದವಿ ಪಡೆದಿದ್ದಾನೆ. ಅತ್ಯುನ್ನತ ದರ್ಜೆಯಲ್ಲಿ ಪಾಸು ಮಾಡಿದ್ದಾನೆ. ಅಭಿನಂದನೆಗಳು ಡಾ.ವಿಘ್ನೇಶ್​ ವೆಂಗಾಲಿಲ್ ಉಜ್ವಲ್’ ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದ ಪಾಯೊಲಿಯವರಾದ ವಿಘ್ನೇಶ್​, 2017ರಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿದ್ದರು. ಬಳಿಕ ಕ್ರೀಡಾ ವೈದ್ಯಕೀಯ ಡಿಪ್ಲೊಮಾ ಪದವಿಗಾಗಿ ಸ್ವಿಜರ್ಲೆಂಡ್‌ನ ಐಒಸಿ ಸೆಂಟರ್‌ಗೆ ತೆರಳಿದ್ದರು. ಪಿಟಿ ಉಷಾ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನ ಇನ್ಸ್‌ಪೆಕ್ಟರ್ ವಿ.ಶ್ರೀನಿವಾಸನ್ ಅವರನ್ನು 1991ರಲ್ಲಿ ಮದುವೆಯಾಗಿದ್ದರು. ಲಾಸ್ ಏಂಜಲೀಸ್‌ನಲ್ಲಿ 1984ರಲ್ಲಿ ಒಲಿಂಪಿಕ್ಸ್‌ನ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಕಂಚು ತಪ್ಪಿಸಿಕೊಂಡಿದ್ದರು. ಆದರೆ, ಮರು ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 5 ಸ್ವರ್ಣ ಹಾಗೂ ಒಂದು ಕಂಚು ಜಯಿಸಿದ್ದರು.