ಪುಣೆ: ಆಮಿರ್ ಮೊಹಮದ್ ಜರ್ದನೇಶ್ (13) ಆಲ್ರೌಂಡ್ ನಿರ್ವಹಣೆಯ ಬಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಪಟನಾ ಪೈರೇಟ್ಸ್ ಎದುರು 42-40 ಅಂಕಗಳಿಂದ ರೋಚಕ ಗೆಲುವು ದಾಖಲಿಸಿದೆ.
ಶುಕ್ರವಾರ ಆರಂಭಗೊಂಡ ಪುಣೆ ಚರಣದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಮೊದಲಾರ್ಧದಲ್ಲಿ 18-21ರಿಂದ ಹಿನ್ನಡೆ ಅನುಭವಿಸಿತು. ನಂತರ ದ್ವೀತಿಯಾರ್ಧದಲ್ಲಿ ಪಟನಾ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ತಿರುಗೇಟು ನೀಡಿದ ಮುಂಬಾ, 2 ಅಂಕಗಳ ಅಂತರದಿಂದ ಗೆಲುವು ಒಲಿಸಿಕೊಂಡಿತು.
ಮುಂಬೈ ಪರ ಗುಮನ್ ಸಿಂಗ್ (8) ಮತ್ತು ವಿಶ್ವಂತ್ ವಿ. (8) ರೈಡಿಂಗ್ನಲ್ಲಿ ಮಿಂಚಿದರು. ಪಟನಾ ಪರ ಸಚಿನ್ 12 ಯಶಸ್ವಿ ರೈಡಿಂಗ್ಗಳೊಂದಿಗೆ ಮಿಂಚಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ಸುಧಾಕರ್ (7) ಮತ್ತು ಮಂಜೀತ್ (5) ಕೂಡ ಸಚಿನ್ಗೆ ಉತ್ತಮ ಬೆಂಬಲ ಒದಗಿಸಿದರು. ಆದರೆ ಡಿಫೆಂಡರ್ಗಳ ವೈಫಲ್ಯದಿಂದ ಪಟನಾಗೆ ಹಿನ್ನಡೆಯಾಯಿತು.
ಪುಣೇರಿಗೆ ತವರಿನಲ್ಲಿ ನಿರಾಸೆ: ಆತಿಥೇಯ ಪುಣೇರಿ ಪಲ್ಟಾನ್ ತಂಡ ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಎದುರು 39-44ರಿಂದ ವೀರೋಚಿತ ಸೋಲು ಅನುಭವಿಸಿತು. ವಿನಯ್ (15) ಹರಿಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲಾರ್ಧದಲ್ಲಿ 24-21ರಿಂದ ಮುನ್ನಡೆ ಸಾಧಿಸಿದ್ದ ಪುಣೇರಿ, ದ್ವೀತಿಯಾರ್ಧದಲ್ಲಿ ಹರಿಯಾಣದ ಆಕ್ರಮಣದ ಎದುರು ಮಂಕಾಯಿತು. ಪುಣೇರಿ ಪರ ನಾಯಕ ಅಸ್ಲಾಂ ಮುಸ್ತಾ (9), ಮೋಹಿತ್ ಗೋಯತ್ (8), ಆಕಾಶ್ ಶಿಂಧೆ (5) ಹೋರಾಟ ವ್ಯರ್ಥಗೊಂಡಿತು.