ಬೆಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತ ಭಾರತ ತಂಡದ ನಾಯಕ ಪವನ್ ಶೆರಾವತ್ ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ ಮೊದಲ ದಿನ ದಾಖಲೆಯ 2.61 ಕೋಟಿ ರೂ. ಮೊತ್ತಕ್ಕೆ ತೆಲುಗು ಟೈಟಾನ್ಸ್ ತಂಡ ಸೇರಿದ್ದಾರೆ. ಇರಾನ್ನ ಯುವ ಆಟಗಾರ ಮೊಹಮ್ಮದ್ ರೆಜಾ ಶಾಡ್ಲು 2ನೇ ಗರಿಷ್ಠ 2.35 ಕೋಟಿ ರೂ.ಗೆ ಪುಣೇರಿ ಪಲ್ಟಾನ್ ತಂಡದ ಪಾಲಾಗಿದ್ದಾರೆ. ಪವನ್ ಕಳೆದ ಆವೃತ್ತಿಯಲ್ಲಿ 2.26 ಕೋಟಿ ರೂ.ಗೆ ತಮಿಳ್ ತಲೈವಾಸ್ ತಂಡ ಸೇರಿದ್ದು ಹಿಂದಿನ ದಾಖಲೆಯಾಗಿತ್ತು.
ಎ&ಬಿ ಕೆಟಗರಿ ಆಟಗಾರರ ಹರಾಜಿನ ಮೊದಲ ಸುತ್ತಿನಲ್ಲಿ ಭಾರತದ ಮಣಿಂದರ್ ಸಿಂಗ್ 2.12 ಕೋಟಿ ರೂ.ಗೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಮರಳಿದರು. ಫೈನಲ್ ಬಿಡ್ ಮ್ಯಾಚ್ (ಎಫ್ಬಿಎಂ) ಕಾರ್ಡ್ ನಿಯಮದ ಮೂಲಕ ಬೆಂಗಾಲ್ ತಂಡ ಮಣಿಂದರ್ರನ್ನು ಬೇರೆ ತಂಡ ಸೇರದಂತೆ ತನ್ನಲ್ಲೇ ಉಳಿಸಿಕೊಂಡಿತು. ಇರಾನ್ನ ಮತ್ತೋರ್ವ ಅನುಭವಿ ಆಟಗಾರ ಜಲ್ ಅಟ್ರಾಚಲಿ 1.60 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರು. ಈ ಮೂಲಕ ಟೂರ್ನಿ ಇತಿಹಾಸದಲ್ಲಿ ಗರಿಷ್ಠ ಮೌಲ್ಯ ಪಡೆದ ಡಿಫೆಂಡರ್ ಎನಿಸಿದರು. ಸಿದ್ಧಾರ್ಥ್ ದೇಸಾಯಿ 1 ಕೋಟಿ ರೂ.ಗೆ ಹರಿಯಾಣ ಸ್ಟೀಲರ್ಸ್ ತಂಡ ಸೇರಿದರು. ಡಿಸೆಂಬರ್ 2ರಿಂದ ಟೂರ್ನಿ ನಡೆಯಲಿದೆ.
ಉಳಿದಂತೆ ಅಂಶು ಮಲಿಕ್ 96.25 ಲಕ್ಷ ರೂ.ಗೆ ದಬಾಂಗ್ ದೆಹಲಿ, ಮಂಜೀತ್ 92 ಲಕ್ಷ ರೂ.ಗೆ ಪಟನಾ, ವಿಜಯ್ ಮಲಿಕ್ 85 ಲಕ್ಷ ರೂ.ಗೆ ಯುಪಿ ಯೋಧಾಸ್, ರೋಹಿತ್ ಗುಲಿಯಾ 58.50 ಲಕ್ಷ ರೂ.ಗೆ ಗುಜರಾತ್, ಬೆಂಗಳೂರು ಬುಲ್ಸ್ ಮಾಜಿ ಆಟಗಾರ ಮಹೇಂದರ್ ಸಿಂಗ್ 40.25 ಲಕ್ಷ ರೂ.ಗೆ ಯು ಮುಂಬಾ ಸೇರಿದರು. ನಿತಿನ್ ರವಲ್ 30 ಲಕ್ಷ ರೂ.ಗೆ ಬೆಂಗಾಲ್, ಮೊಹಮ್ ಇಸ್ಮಾಯಿಲ್ 22 ಲಕ್ಷ ರೂ.ಗೆ ಗುಜರಾತ್, ಗಿರೀಶ್ ಎರ್ನಾಕ್ 20 ಲಕ್ಷ ರೂ.ಗೆ ಯು ಮುಂಬಾ, ಅಕ್ರಮ್ ಶೇಕ್ 20.25 ಲಕ್ಷ ರೂ.ಗೆ ಗುಜರಾತ್ ತಂಡ ಸೇರಿದರು.
ಮಾರಾಟವಾಗದ ಪ್ರಮುಖರು: ಎ ಕೆಟಗರಿಯ ಮೊದಲ ಸುತ್ತಿನ ಹರಾಜಿನಲ್ಲಿ ಅನುಭವಿ ಆಟಗಾರರಾದ ಸಂದೀಪ್ ನರ್ವಾಲ್ ಮತ್ತು ಭಾರತ ತಂಡದ ಮಾಜಿ ನಾಯಕ ದೀಪಕ್ ಹೂಡಾ ಯಾವುದೇ ತಂಡಕ್ಕೂ ಮಾರಾಟವಾಗದೆ ಉಳಿದಿದ್ದು ಅಚ್ಚರಿ ತಂದಿತು.
ಕೋಟಿ ವೀರರು
ಪವನ್ ಶೆರಾವತ್ (ತೆಲುಗು ಟೈಟಾನ್ಸ್): 2.61 ಕೋಟಿ ರೂ.
ಮೊಹಮ್ಮದ್ ರೆಜಾ ಶಾಡ್ಲು (ಪುಣೇರಿ): 2.35 ಕೋಟಿ ರೂ.
ಮಣಿಂದರ್ ಸಿಂಗ್ (ಬೆಂಗಾಲ್): 2.12 ಕೋಟಿ ರೂ.
ಜಲ್ ಅಟ್ರಾಚಲಿ (ಗುಜರಾತ್): 1.60 ಕೋಟಿ ರೂ.
ಸಿದ್ಧಾರ್ಥ್ ದೇಸಾಯಿ (ಹರಿಯಾಣ): 1 ಕೋಟಿ ರೂ.