ಕ್ರೀಡೆ

ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಸ್ಟಾರ್​ಗಳ ಕಾದಾಟ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದೆ. ಅಕ್ಟೋಬರ್​ 18ರಂದು ಹೈದರಾಬಾದ್​ನಲ್ಲಿ ನಡೆಯಲಿರುವ ಬೆಂಗಳೂರು ಬುಲ್ಸ್​ ಮತ್ತು ತೆಲುಗು ಟೈಟಾನ್ಸ್​ ತಂಡಗಳ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ಸ್ಟಾರ್​ ಆಟಗಾರರಾದ ಪ್ರದಿಪ್​ ನರ್ವಾಲ್​ (ಬುಲ್ಸ್​) ಮತ್ತು ಪವನ್​ ಸೆಹ್ರಾವತ್​ (ಟೈಟಾನ್ಸ್​) ಮೊದಲ ಪಂದ್ಯದಲ್ಲೇ ಮುಖಾಮುಖಿ ಆಗಲಿದ್ದಾರೆ. ಮೊದಲ ದಿನದ 2ನೇ ಪಂದ್ಯದಲ್ಲಿ ದಬಾಂಗ್​ ದೆಹಲಿ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ.

ಈ ಬಾರಿ ಲೀಗ್​ ಹಂತದ ಪಂದ್ಯಗಳು 3 ನಗರಗಳಲ್ಲಿ ಮಾತ್ರ ನಡೆಯಲಿವೆ. ಹೈದರಾಬಾದ್​ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನವೆಂಬರ್​ 9ರವರೆಗೆ ಟೂರ್ನಿಯ ಮೊದಲ ಚರಣದ ಪಂದ್ಯಗಳು ನಡೆಯಲಿವೆ. ನಂತರ ನವೆಂಬರ್​ 10ರಿಂದ ಡಿಸೆಂಬರ್​ 1ರವರೆಗೆ ನೋಯ್ಡಾದಲ್ಲಿ 2ನೇ ಚರಣದ ಪಂದ್ಯಗಳು ನಡೆಯಲಿವೆ. ಡಿಸೆಂಬರ್​ 3ರಿಂದ 24ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್​ ಸ್ಟೇಡಿಯಂನಲ್ಲಿ 3ನೇ ಚರಣದ ಪಂದ್ಯಗಳು ನಡೆಯಲಿವೆ. ಫೈನಲ್​ ಸಹಿತ ಪ್ಲೇಆಫ್​ ಹಂತದ ಪಂದ್ಯಗಳ ಸ್ಥಳ ಮತ್ತು ದಿನಾಂಕವನ್ನು ತಡವಾಗಿ ಪ್ರಕಟಿಸಲಾಗುವುದು ಎಂದು ಟೂರ್ನಿಯ ಸಂಟಕ ಮಶಾಲ್​ ಸ್ಪೋರ್ಟ್ಸ್​ ಸಂಸ್ಥೆ ತಿಳಿಸಿದೆ.

ಕಳೆದ ತಿಂಗಳು ಮುಂಬೈನಲ್ಲಿ ನಡೆದ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರು ಕೋಟ್ಯಧಿಪತಿಗಳಾಗಿ ಹೊರಹೊಮ್ಮಿದ್ದರು. ಈ ಪೈಕಿ ರೈಡರ್​ ಸಚಿನ್​ ಸರ್ವಾಧಿಕ 2.15 ಕೋಟಿ ರೂ.ಗೆ ತಮಿಳ್​ ತಲೈವಾಸ್​ ಪಾಲಾಗಿದ್ದರು. ಲೀಗ್​ ಹಂತದಲ್ಲಿ ಪ್ರತಿದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ಕ್ಕೆ ಶುರುವಾಗಲಿದೆ. 12 ತಂಡಗಳು ಲೀಗ್​ ಹಂತದಲ್ಲಿ ಪರಸ್ಪರ 2 ಬಾರಿ ಮುಖಾಮುಖಿ ಆಗಲಿದ್ದು, ಎಲ್ಲ ತಂಡಗಳು ತಲಾ 22 ಲೀಗ್​ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಪಂದ್ಯಗಳು ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​ ಮತ್ತು ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ (ಒಟಿಟಿ) ನೇರಪ್ರಸಾರ ಕಾಣಲಿವೆ.

ಬೆಂಗಳೂರು ಬುಲ್ಸ್​ ವೇಳಾಪಟ್ಟಿ

ದಿನಾಂಕ ಎದುರಾಳಿ ಸಮಯ

ಅ.18 ತೆಲುಗು ಟೈಟಾನ್ಸ್​ ರಾತ್ರಿ 8

ಅ.20 ಗುಜರಾತ್​ ಜೈಂಟ್ಸ್​ ರಾತ್ರಿ 9

ಅ. 22 ಯುಪಿ ಯೋಧಾಸ್​ ರಾತ್ರಿ 9

ಅ. 25 ಪುಣೇರಿ ಪಲ್ಟಾನ್​ ರಾತ್ರಿ 9

ಅ. 29 ದಬಾಂಗ್​ ದೆಹಲಿ ರಾತ್ರಿ 9

ನ. 2 ತೆಲುಗು ಟೈಟಾನ್ಸ್​ ರಾತ್ರಿ 8

ನ. 4 ತಮಿಳ್​ ತಲೈವಾಸ್​ ರಾತ್ರಿ 8

ನ. 9 ಬೆಂಗಾಲ್​ ವಾರಿಯರ್ಸ್​ ರಾತ್ರಿ 9

ನ. 12 ಜೈಪುರ ಪಿಂಕ್​ಪ್ಯಾಂಥರ್ಸ್​ ರಾತ್ರಿ 8

ನ. 16 ದಬಾಂಗ್​ ದೆಹಲಿ ರಾತ್ರಿ 9

ನ. 18 ಯು ಮುಂಬಾ ರಾತ್ರಿ 8

ನ. 19 ಪಟನಾ ಪೈರೇಟ್ಸ್​ ರಾತ್ರಿ 9

ನ. 21 ಹರಿಯಾಣ ಸ್ಟೀಲರ್ಸ್​ ರಾತ್ರಿ 8

ನ. 25 ಯು ಮುಂಬಾ ರಾತ್ರಿ 8

ನ. 30 ಪಟನಾ ಪೈರೇಟ್ಸ್​ ರಾತ್ರಿ 8

ಡಿ. 3 ಗುಜರಾತ್​ ಜೈಂಟ್ಸ್​ ರಾತ್ರಿ 8

ಡಿ. 10 ಬೆಂಗಾಲ್​ ವಾರಿಯರ್ಸ್​ ರಾತ್ರಿ 9

ಡಿ. 11 ಹರಿಯಾಣ ಸ್ಟೀಲರ್ಸ್​ ರಾತ್ರಿ 8

ಡಿ. 13 ಪುಣೇರಿ ಪಲ್ಟಾನ್​ ರಾತ್ರಿ 9

ಡಿ. 17 ಜೈಪುರ ಪಿಂಕ್​ಪ್ಯಾಂಥರ್ಸ್​ ರಾತ್ರಿ 9

ಡಿ. 22 ತಮಿಳ್​ ತಲೈವಾಸ್​ ರಾತ್ರಿ 8

ಡಿ. 24 ಯುಪಿ ಯೋಧಾಸ್​ ರಾತ್ರಿ 8