ಚಂಡೀಗಢ: ಕೋವಿಡ್ನಿಂದ ಬಳಲುತ್ತಿರುವ ಅಥ್ಲೆಟಿಕ್ ದಿಗ್ಗಜ ಮಿಲ್ಖಾ ಸಿಂಗ್ ಅವರ ಆರೋಗ್ಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಖುದ್ದು ಮೋದಿ ಅವರೇ ಮಿಲ್ಖಾ ಸಿಂಗ್ಗೆ ಫೋನ್ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎರಡು ವಾರಗಳ ಹಿಂದಷ್ಟೇ ಮಿಲ್ಖಾ ಸಿಂಗ್ಗೆ ಕೋವಿಡ್ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದರು. ಗುರುವಾರ ಮತ್ತೆ ಪೋಸ್ಟ್ ಗ್ರ್ಯಾಜುವೆಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ (ಪಿಜಿಐಎಂಇಆರ್) ಕೇಂದ್ರದ ಐಸಿಯೂಗೆ ಸೇರಿಸಲಾಗಿದೆ.
ಮಿಲ್ಖಾ ಸಿಂಗ್ ಅವರು ಅದಷ್ಟು ಬೇಗ ಸುಧಾರಿಸಿಕೊಳ್ಳಲಿ, ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಮೋದಿ ಹಾರೈಸಿದ್ದಾರೆ.
ಮೇ 24 ರಂದು ಮಿಲ್ಖಾ ಸಿಂಗ್ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮೊಹಾಲಿಯ ಫೋಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಗೆಲಸದವರ ಮೂಲಕ ಮಿಲ್ಖಾ ಸಿಂಗ್ ಅವರಿಗೆ ಕೋವಿಡ್ ಹರಡಿತ್ತು. ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲ್ ಕೌರ್ ಅವರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ದಿಗ್ಗಜ ಮಿಲ್ಖಾ ಸಿಂಗ್, ಏಷ್ಯಾಡ್ ಚಾಂಪಿಯನ್ ಆಗಿದ್ದರು, 1958ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಗೆದ್ದಿದ್ದರೆ, 1960ರ ರೋಮ್ ಒಲಿಂಪಿಕ್ಸ್ನಲ್ಲಿ 400 ಮೀಟರ್ ಓಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 1956 ಹಾಗೂ 1964ರ ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸಿದ್ದಾರೆ. 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಭಾಜನರಾಗಿದ್ದಾರೆ.