ಕ್ರೀಡೆ

ವಿಶ್ವದೆಲ್ಲೆಡೆ ಕ್ರೀಡೆ ಪುನರಾರಂಭಕ್ಕೆ ಸಿದ್ಧತೆ

ಬೆಂಗಳೂರು: ಕರೊನಾ ಭೀತಿ ಜಗತ್ತಿನ ಎಲ್ಲೆಡೆ ವ್ಯಾಪಿಸಿದ ಬೆನ್ನಲ್ಲೇ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ವೈರಸ್ ಹಾವಳಿ ಇನ್ನೂ ಸಂಪೂರ್ಣ ಕಡಿಮೆಯಾಗದ ನಡುವೆಯೂ ಜಗತ್ತಿನ ವಿವಿಧೆಡೆ ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಸಿದ್ಧತೆಗಳುಶುರುವಾಗಿವೆ. ಯುರೋಪ್ ದೇಶಗಳಲ್ಲಿ ಪ್ರಮುಖವಾಗಿ, ಮೊಟಕು ಗೊಂಡ ಫುಟ್​ಬಾಲ್ ಋತುವಿನ ಪುನರಾರಂಭಕ್ಕೆ ಹೆಚ್ಚಿನ ಆಸಕ್ತಿ ಇದ್ದರೆ, ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್, ರಗ್ಬಿ ಅಭ್ಯಾಸದ ಆರಂಭಕ್ಕೆ ರೂಪುರೇಷೆಗಳನ್ನು ರೂಪಿಸಲಾಗುತ್ತಿದೆ. ಯುರೋಪಿಯನ್ ಫುಟ್​ಬಾಲ್ ಲೀಗ್​ಗಳ ಪೈಕಿ ಜರ್ಮನಿಯಲ್ಲಿ ಮೊದಲಾಗಿ ಚಟುವಟಿಕೆ ಆರಂಭವಾಗುತ್ತಿದ್ದು, ಮೇ 16ರಿಂದ ಬುಂಡೆಸ್​ಲಿಗಾ ಪಂದ್ಯಗಳನ್ನು ನಡೆಸಲು ವೇದಿಕೆ ಸಜ್ಜಾಗಿದೆ.

ಮೇ 14ರಂದು ಆತಿಥೇಯ ಸ್ಕಾಲ್ಕೆ ಮತ್ತು ಬೊರುಷಿಯಾ ಡಾರ್ಟ್ ಮಂಡ್ ತಂಡಗಳ ನಡುವಿನ ಪಂದ್ಯದ ಮೂಲಕ ಜರ್ಮನಿಯ ಫುಟ್​ಬಾಲ್ ಲೀಗ್ ಶುರುವಾಗಲಿದೆ. ಸರ್ಕಾರದಿಂದ ಹಸಿರು ನಿಶಾನೆ ದೊರೆತ ಬೆನ್ನಲ್ಲಿಯೇ ಲೀಗ್ ಪುನರಾರಂಭಕ್ಕೆ ವೇಳಾಪಟ್ಟಿ ರೂಪಿಸಲಾಗಿದೆ. ಪ್ರೇಕ್ಷಕರನ್ನು ನಿರ್ಬಂಧಿಸುವುದರ ಜತೆಗೆ ಟೂರ್ನಿಗೆ ಹಲವು ಕಟ್ಟುನಿಟ್ಟಿನ ಆರೋಗ್ಯ ಮಾರ್ಗಸೂಚಿಗಳನ್ನೂ ವಿಧಿಸಲಾಗಿದೆ.

ಪ್ರೇಕ್ಷಕರಿಲ್ಲದೆ ಇಪಿಎಲ್?: ಬ್ರಿಟನ್​ನ ಇಪಿಎಲ್ ಫುಟ್​ಬಾಲ್ ಟೂರ್ನಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ತಂಡಗಳ ಶೇ. 13ರಷ್ಟು ಆದಾಯ ಟಿಕೆಟ್ ಮಾರಾಟದಿಂದಲೇ ಬರುತ್ತವೆ. ಹಾಗಿದ್ದರೂ, ಅರ್ಧಕ್ಕೆ ನಿಂತಿದ್ದ ಇಪಿಎಲ್ ಋತುವನ್ನು ಪ್ರೇಕ್ಷಕರಿಲ್ಲದೆ ಮತ್ತೆ ಆರಂಭಿಸುವ ಚಿಂತನೆ ನಡೆದಿದೆ. ಯಾಕೆಂದರೆ ಹಾಲಿ ವರ್ಷದ ಟೂರ್ನಿ ಪೂರ್ಣಗೊಳ್ಳದೇ ಹೋದರೆ, ಕ್ಲಬ್​ಗಳಿಗೆ ಬರೋಬ್ಬರಿ 7,150 ಕೋಟಿ ರೂ. (762 ದಶಲಕ್ಷ ಪೌಂಡ್) ನಷ್ಟವಾಗುತ್ತದೆ. ಮಾರ್ಚ್ 9ರಂದು ಕೊನೆಯದಾಗಿ ಇಪಿಎಲ್ ಪಂದ್ಯ ನಡೆದಿದ್ದು, ಜೂನ್​ನಿಂದ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸುವ ಯೋಜನೆ ರೂಪಿಸಲಾಗುತ್ತಿದೆ.

ಬಾರ್ಸಿಲೋನಾ, ರಿಯಲ್ ಮ್ಯಾಡ್ರಿಡ್ ಕರೊನಾ ಟೆಸ್ಟ್: ಸ್ಪೇನ್​ನಲ್ಲೂ ಲಾ ಲೀಗಾ ಪುನರಾರಂಭಕ್ಕೆ ಸಿದ್ಧತೆ ಶುರುವಾಗಿದ್ದು, ನಿರ್ಬಂಧಿತ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಪ್ರತಿಷ್ಠಿತ ಕ್ಲಬ್​ಗಳಾದ ಬಾರ್ಸಿಲೋನಾ ಮತ್ತು ರಿಯಲ್ ಮ್ಯಾಡ್ರಿಡ್​ನ ಆಟಗಾರರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 48 ಗಂಟೆಗಳಲ್ಲಿ ಫಲಿತಾಂಶ ಹೊರಬರಲಿದೆ. ಬಾರ್ಸಿಲೋನಾ ನಾಯಕ ಲಿಯೊನೆಲ್ ಮೆಸ್ಸಿ ಶೀಘ್ರ ತರಬೇತಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಲೀಗ್ ಪುನರಾರಂಭಕ್ಕೆ ಎಲ್ಲ ಆಟಗಾರರ ಕರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಬಳಿಕ ಸಣ್ಣ ಸಣ್ಣ ಗುಂಪುಗಳಲ್ಲಿ ಅಭ್ಯಾಸಕ್ಕೆ ಅವಕಾಶ ಲಭಿಸಲಿದೆ. ಜೂನ್ ಮಧ್ಯಭಾಗದಿಂದ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯುವ ನಿರೀಕ್ಷೆ ಇದೆ. ಕರೊನಾದಿಂದಾಗಿ ಅತ್ಯಧಿಕ ಹೊಡೆತ ತಿಂದ ದೇಶಗಳಲ್ಲಿ ಸ್ಪೇನ್ ಒಂದಾಗಿದ್ದು, 26 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಸೆರ್ಬಿಯಾ, ಕ್ರೊವೇಷಿಯಾದಲ್ಲೂ ಪುನರಾರಂಭ: ಸೆರ್ಬಿಯಾ ಮತ್ತು ಕ್ರೊವೇಷಿಯಾದಲ್ಲೂ ಫುಟ್​ಬಾಲ್ ಲೀಗ್​ಗಳನ್ನು ಕ್ರಮವಾಗಿ ಮೇ 30 ಮತ್ತು ಜೂನ್ 6ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ಈ ಟೂರ್ನಿಗಳಲ್ಲಿ ನಾಕೌಟ್ ಹಂತದ ಪಂದ್ಯಗಳು ಬಾಕಿ ಉಳಿದಿವೆ.

ಕ್ವಾರಂಟೈನ್​ನಲ್ಲಿ ರೊನಾಲ್ಡೊ: ಕರೊನಾದಿಂದ ತತ್ತರಿಸಿರುವ ಇಟಲಿಯಲ್ಲಿ ಪ್ರತಿಷ್ಠಿತ ದೇಶೀಯ ಫುಟ್​ಬಾಲ್ ಟೂರ್ನಿ ಸೆರೀ ಎ ಚಾಂಪಿಯನ್​ಷಿಪ್ ಸದ್ಯಕ್ಕೆ ಪುನರಾರಂಭ ಕಾಣುವ ಸೂಚನೆಗಳಿಲ್ಲ. ಮಾರ್ಚ್​ನಲ್ಲಿ ಸೆರೀ ಎ ಸ್ಥಗಿತಗೊಂಡಾಗ ಇಟಲಿಯಲ್ಲಿ 500 ಮಂದಿ ಮೃತಪಟ್ಟಿದ್ದರೆ, ಈಗ ಈ ಸಂಖ್ಯೆ 30 ಸಾವಿರ ದಾಟಿದೆ. ಇದರ ನಡುವೆ ಮೇ 18ರಿಂದ ತರಬೇತಿಯನ್ನಾದರೂ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಪೋರ್ಚುಗಲ್​ನಿಂದ 2 ತಿಂಗಳ ಬಳಿಕ ಇಟಲಿಗೆ ಆಗಮಿಸಿರುವ ಜುವೆಂಟಸ್​ನ ತಾರಾ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊರನ್ನು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇಡಲಾಗಿದೆ. -ಪಿಟಿಐ/ಏಜೆನ್ಸೀಸ್

ಈ ವರ್ಷ ಟೆನಿಸ್ ನಡೆಯುವುದು ಡೌಟ್

ಕ್ಲಬ್ ಫುಟ್​ಬಾಲ್​ಗಳು ಶುರುವಾದರೂ, ಈ ವರ್ಷ ಮತ್ತೆ ಟೆನಿಸ್ ಟೂರ್ನಿಗಳು ನಡೆಯುವುದು ಅನುಮಾನ ಎಂದು 19 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಸ್ಪೇನ್​ನ ರಾಫೆಲ್ ನಡಾಲ್ ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸಲು ಲಾಜಿಸ್ಟಿಕ್ಸ್ ಸಮಸ್ಯೆ ಎದುರಾಗುತ್ತದೆ. ಟೂರ್ನಿಗಳಿಗಾಗಿ ಒಂದುದೇಶದಿಂದ ಮತ್ತೊಂದು ದೇಶಕ್ಕೆ ಆಟಗಾರರನ್ನು ಕರೆದೊಯ್ಯು ವುದು ಕಠಿಣ. ನಮ್ಮ ಜೀವನದ ಅಮೂಲ್ಯ ಒಂದು ವರ್ಷ ನಷ್ಟವಾಯಿತು ಎಂದೇ ಭಾವಿಸುವುದು ಉತ್ತಮ. ಇನ್ನು 2021ರ ಋತುವಿಗೆ ಸಿದ್ಧವಾಗಬೇಕಿದೆ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಅಭ್ಯಾಸ

ಕ್ರೀಡೆ ಪುನರಾರಂಭಕ್ಕೆ ಈಗಾಗಲೆ ವಿವಿಧ ಮಾರ್ಗಸೂಚಿ ಗಳನ್ನು ಸಿದ್ಧಪಡಿಸಲಾಗಿರುವ ಆಸ್ಟ್ರೇಲಿಯಾದಲ್ಲಿ ಮಾಸಾಂತ್ಯದೊಳಗೆ ಕ್ರಿಕೆಟ್ ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ವೈದ್ಯಕೀಯ ಮುಖ್ಯಸ್ಥ ಡಾ. ಜಾನ್ ಓರ್ಕಾರ್ಡ್ ಮೇಲ್ವಿಚಾರಣೆಯಲ್ಲಿ ಶೀಘ್ರದಲ್ಲೇ ಕ್ರಿಕೆಟಿಗರ ತರಬೇತಿಯನ್ನು ಆರಂಭಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಚಿಂತನೆ ನಡೆಸಿದೆ.