ಕ್ರೀಡೆ

ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಪಂಜಾಬ್​ ಪ್ರತಿರೋಧ; ಹುಬ್ಬಳ್ಳಿಯಲ್ಲಿ ಸೋಲಿನಿಂದ ಪಾರಾಗಲು ಪ್ರವಾಸಿಗರ ಹೋರಾಟ

ಹುಬ್ಬಳ್ಳಿ: ಆರಂಭಿಕ ಪ್ರಭ್​ಸಿಮ್ರಾನ್​ ಸಿಂಗ್​ (100 ರನ್​, 146 ಎಸೆತ, 17 ಬೌಂಡರಿ) ಶತಕ ಹಾಗೂ ಅಭಿಷೇಕ್​ ಶರ್ಮ (91 ರನ್​, 123 ಎಸೆತ, 9 ಬೌಂಡರಿ, 3 ಸಿಕ್ಸರ್​) ಶತಕವಂಚಿತ ಬ್ಯಾಟಿಂಗ್​ ನೆರವಿನಿಂದ ಪಂಜಾಬ್​ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಸಿ ಗುಂಪಿನ ಮೊದಲ ಲೀಗ್​ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ದಿಟ್ಟ ಪ್ರತಿರೋಧ ತೋರಿದ್ದು, ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಭಾನುವಾರ 6 ವಿಕೆಟ್​ಗೆ 461 ರನ್​ಗಳಿಂದ ಆಟ ಮುಂದುವರಿಸಿದ ಕರ್ನಾಟಕ ತಂಡ 8 ವಿಕೆಟ್​ಗೆ 514 ರನ್​ಗಳ ಬೃಹತ್​ ಮೊತ್ತ ಪೇರಿಸಿ ಪ್ರಥಮ ಇನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತು ಮತ್ತು 362 ರನ್​ಗಳ ಭಾರಿ ಮುನ್ನಡೆ ಸಾಧಿಸಿತು. ಪ್ರತಿಯಾಗಿ ದಿಟ್ಟ ಉತ್ತರ ನೀಡಲಾರಂಭಿಸಿದ ಪಂಜಾಬ್​ ದಿನದಂತ್ಯಕ್ಕೆ ತನ್ನ ದ್ವೀತಿಯ ಇನಿಂಗ್ಸ್​ನಲ್ಲಿ 3 ವಿಕೆಟ್​ಗೆ 238 ರನ್​ ಪೇರಿಸಿದೆ. ಪ್ರವಾಸಿ ಪಂಜಾಬ್​ ತಂಡ ಇನಿಂಗ್ಸ್​ ಸೋಲು ತಪ್ಪಿಸಿಕೊಳ್ಳಲು ಇನ್ನೂ 124 ರನ್​ ಗಳಿಸಬೇಕಿದೆ. ನಾಯಕ ಮಂದೀಪ್​ ಸಿಂಗ್​ (15*) ಹಾಗೂ ನೇಹಲ್​ ವಧೇರಾ (9*) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಮಯಾಂಕ್​ ಅಗರ್ವಾಲ್​ ಬಳಗ ಸೋಮವಾರ ಪಂಜಾಬ್​ ತಂಡದ ಕೊನೇ 7 ವಿಕೆಟ್​ಗಳನ್ನು ಬೇಗನೆ ಕಬಳಿಸಿ ಗೆಲುವಿನೊಂದಿಗೆ ಪೂರ್ಣ 6 ಅಂಕ ಸಂಪಾದಿಸಲು ಹೋರಾಡಲಿದೆ.

500ರ ಗಡಿ ದಾಟಿದ ಮಯಾಂಕ್​ ಪಡೆ

ಬೆಳಗ್ಗೆ 6 ವಿಕೆಟ್​ಗೆ 461 ರನ್​ಗಳಿಂದ ಆಟ ಮುಂದುವರಿಸಿದ ಕರ್ನಾಟಕ ಮೊದಲ ಓವರ್​ನಲ್ಲೇ ವೈಶಾಕ್​ ವಿಜಯಕುಮಾರ್​ ವಿಕೆಟ್​ ಕಳೆದುಕೊಂಡಿತು. ವಿಕೆಟ್​ ಕೀಪರ್​-ಬ್ಯಾಟರ್​ ಎಸ್​. ಶರತ್​ (76 ರನ್​, 193ಎಸೆತ, 6 ಬೌಂಡರಿ) ಹಾಗೂ ರೋಹಿತ್​ ಕುಮಾರ್​ 8ನೇ ವಿಕೆಟ್​ಗೆ 42ರನ್​ ಸೇರಿಸಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಪಂಜಾಬ್​ ವೇಗಿ ಸಿದ್ದಾರ್ಥ್​ ಕೌಲ್​, ಶರತ್​ರನ್ನು ಎಲ್​ಬಿ ಬಲೆಗೆ ಕೆಡವಿದರು. ಇದಾದ ಕೆಲ ನಿಮಿಷಗಳಲ್ಲಿ ನಾಯಕ ಮಯಾಂಕ್​ ಅಗರ್ವಾಲ್​ ಕರ್ನಾಟಕ ತಂಡದ ಇನಿಂಗ್ಸ್​ ಡಿಕ್ಲೇರ್​ ಮಾಡಿದರು.

ಸೋಲು ತಪ್ಪಿಸಲು ಪಂಜಾಬ್​ ಫೈಟ್​

ಪ್ರಥಮ ಇನಿಂಗ್ಸ್​ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಪಂಜಾಬ್​ಗೆ ದ್ವೀತಿಯ ಇನಿಂಗ್ಸ್​ನಲ್ಲಿ ಉತ್ತಮ ಆರಂಭದ ಅವಶ್ಯಕತೆ ಇತ್ತು. ಅದಕ್ಕೆ ತಕ್ಕಂತೆ ಆಟವಾಡಿದ ಆರಂಭಿಕರಾದ ಅಭಿಷೇಕ್​ ಶರ್ಮ ಹಾಗೂ ಪ್ರಭ್​ಸಿಮ್ರಾನ್​ ಸಿಂಗ್​ ಮೊದಲ ವಿಕೆಟ್​ಗೆ 192 ರನ್​ ಸೇರಿಸಿದರು. ಹೆಚ್ಚು ಅಕ್ರಮಣಕಾರಿಯಾಗಿದ್ದ ಅಭಿಷೇಕ್​, ರೋಹಿತ್​ ಕುಮಾರ್​ ಓವರ್​ವೊಂದರಲ್ಲಿ ಸತತವಾಗಿ 1 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅರ್ಧಶತಕ ಪೂರೈಸಿದರು. ಅಭಿಷೇಕ್​ 69 ರನ್​ಗಳಿಸಿದ್ದಾಗ ವೇಗಿ ವಾಸುಕಿ ಕೌಶಿಕ್​ ಎಸೆತದಲ್ಲಿ ಬದಲಿ ಕ್ಷೇತ್ರರಕ್ಷಕ ಶಶಿಕುಮಾರ ಕ್ಯಾಚ್​ ಬಿಟ್ಟರು. ಇದರ ಲಾಭ ಪಡೆದ ಪಂಜಾಬ್​ ಚಹಾ ವಿರಾಮದವರೆಗೆ ವಿಕೆಟ್​ ನಷ್ಟವಿಲ್ಲದೆ 169ರನ್​ ಗಳಿಸಿತು. ಬಳಿಕ ವೈಶಾಕ್​ ಬೌಲಿಂಗ್​ನಲ್ಲಿ 3 ಬೌಂಡರಿ ಬಾರಿಸಿದ ಪ್ರಭ್​ಸಿಮ್ರಾನ್​, ಸಮರ್ಥ್​ ಬೌಲಿಂಗ್​ನಲ್ಲಿ 1 ರನ್​ ಗಳಿಸಿ ಶತಕ ಪೂರೈಸಿದರು. ಅಭಿಷೇಕ್​ ಶರ್ಮರನ್ನು ಬೌಲ್ಡ್​ ಮಾಡಿ ಸಮರ್ಥ್​ ಕರ್ನಾಟಕಕ್ಕೆ ಮೊದಲ ವಿಕೆಟ್​ ಒದಗಿಸಿದರು. ಮುಂದಿನ ಓವರ್​ನಲ್ಲಿ ವಿದ್ವತ್​ ಕಾವೇರಪ್ಪ ಎಸೆತದಲ್ಲಿ ಪ್ರಭ್​ಸಿಮ್ರಾನ್​ ಸಹ ಬೌಲ್ಡ್​ ಆದರು. ನಮನ್​ ಧೀರ್​ರನ್ನು ಔಟ್​ ಮಾಡಿ ಶುಭಾಂಗ್​ ಹೆಗ್ಡೆ ಪಂದ್ಯದಲ್ಲಿ ಮೊದಲ ವಿಕೆಟ್​ ಪಡೆದರು. ಪ್ರಭ್​ಸಿಮ್ರಾನ್​ಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇದು 4ನೇ ಶತಕವಾಗಿದೆ.

ಪಂಜಾಬ್​: 152 ಮತ್ತು 68 ಓವರ್​ಗಳಲ್ಲಿ 3 ವಿಕೆಟ್​ಗೆ 238 (ಅಭಿಷೇಕ್​ ಶರ್ಮ 91, ಪ್ರಭ್​ಸಿಮ್ರಾನ್​ ಸಿಂಗ್​ 100, ನಮನ್​ ಧೀರ್​ 20, ಮಂದೀಪ್​ ಸಿಂಗ್​ 15*, ನೇಹಲ್​ ವಧೇರಾ 9*, ವಿದ್ವತ್​ ಕಾವೇರಪ್ಪ 28ಕ್ಕೆ 1, ಸಮರ್ಥ್​ 12ಕ್ಕೆ 1, ಶುಭಾಂಗ್​ ಹೆಗ್ಡೆ 54ಕ್ಕೆ 1). ಕರ್ನಾಟಕ: 140 ಓವರ್​ಗಳಲ್ಲಿ 8 ವಿಕೆಟ್​ಗೆ 514 (ಎಸ್​. ಶರತ್​ 76, ವೈಶಾಕ್​ ವಿಜಯಕುಮಾರ್​ 19, ರೋಹಿತ್​ಕುಮಾರ್​ ಎ.ಸಿ. 22*, ವಿದ್ವತ್​ ಕಾವೇರಪ್ಪ 4*, ಅರ್ಷದೀಪ್​ ಸಿಂಗ್​ 92ಕ್ಕೆ 3, ಪ್ರೇರಿತ್​ ದತ್ತ್​ 84ಕ್ಕೆ 2, ನಮನ್​ ಧೀರ್​ 46ಕ್ಕೆ 2, ಸಿದ್ದಾರ್ಥ್​ ಕೌಲ್​ 94ಕ್ಕೆ 1).