ಕ್ರೀಡೆ

ಆರ್.ಅಶ್ವಿನ್‌ಗೆ ಕೋಚ್ ರಿಕ್ಕಿ ಪಾಂಟಿಂಗ್ ನೀಡಿದ ಎಚ್ಚರಿಕೆ ಏನು ಗೊತ್ತೇ?

ಮೆಲ್ಬೋರ್ನ್: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಂಕಡಿಂಗ್ ಹೆಸರು ಭಾರಿ ಸದ್ದು ಮಾಡಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ಜೋಸ್ ಬಟ್ಲರ್‌ರನ್ನು ಅಂದಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್ ಮಂಕಡಿಂಗ್ ಮೂಲಕ ಔಟ್ ಮಾಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಸಾಕ್ಷಿಯಾಗಿತ್ತು. ಅಶ್ವಿನ್ ಈ ಬಾರಿ ಯಾವುದೇ ಕಾರಣಕ್ಕೂ ಮಂಕಡಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ. ಅದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ ರಾಯಲ್ಸ್ ಪರ 69 ರನ್‌ಗಳಿಸಿ ನಾನ್-ಸ್ಟ್ರೈಕ್‌ನಲ್ಲಿದ್ದ ಜೋಸ್ ಬಟ್ಲರ್, ಅಶ್ವಿನ್ ಬೌಲಿಂಗ್ ಮಾಡುವ ಮೊದಲೇ ಕ್ರೀಸ್ ಬಿಟ್ಟಿದ್ದರು. ಈ ಅವಕಾಶ ಉಪಯೋಗಿಸಿಕೊಂಡ ಅಶ್ವಿನ್, ಬಟ್ಲರ್ ಅವರನ್ನು ರನೌಟ್ ಬಲೆಗೆ ಬೀಳಿಸಿದ್ದರು. ಅಶ್ವಿನ್ ಅವರ ನಡವಳಿಕೆ ಭಾರಿ ಟೀಕೆಗೆ ವ್ಯಕ್ತವಾಗಿತ್ತು. ‘ಈ ಕುರಿತು ಈಗಾಗಲೇ ಅಶ್ವಿನ್ ಜತೆಗೆ ಚಾಟ್ ನಡೆಸಿದ್ದೇನೆ. ನಿಯಮದ ಪ್ರಕಾರ ರನೌಟ್ ಮಾಡಬಹುದು. ಆದರೆ, ಕ್ರೀಡಾ ಸ್ಫೂರ್ತಿ ದೃಷ್ಟಿಯಿಂದ ಈ ರೀತಿ ಮಾಡುವುದು ಸರಿಯಲ್ಲ’ ಎಂದು ಡೆಲ್ಲಿ ತಂಡದ ಕೋಚ್ ಪಾಂಟಿಂಗ್ ಹೇಳಿದ್ದಾರೆ. ಕಳೆದ ಅಶ್ವಿನ್ ಮಾಡಿದ್ದ ರೀತಿಯನ್ನು ಗಮನಿಸಿ ತಂಡದ ಆಟಗಾರರಿಗೆ ಸೂಚನೆ ನೀಡಿದ್ದೆ. ಅಶ್ವಿನ್ ನೋಡಿ ಇತರ ಆಟಗಾರರನ್ನೇ ಇದನ್ನೇ ಮಾಡುವುದನ್ನು ಕಲಿಯುತ್ತಾರೆ. ಈ ರೀತಿ ಮಾಡಕೂಡದು ಎಂದು ಸೂಚಿಸಿದ್ದೆ ಎಂದು ಪಾಂಟಿಂಗ್ ಹೇಳಿದ್ದಾರೆ. ಅಶ್ವಿನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗವಾಗಿದ್ದಾರೆ.

45 ವರ್ಷದ ಕೋಚ್ ರಿಕ್ಕಿ ಪಾಂಟಿಂಗ್ 1995 ರಿಂದ 2012ರವರೆಗೆ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. 2003 ಹಾಗೂ 2007ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದರು. ಸೆ.19 ರಿಂದ ನ.10 ರವರೆಗೆ ಯುಎಇಯಲ್ಲಿ ಐಪಿಎಲ್ ನಡೆಯಲಿದೆ.