ಕ್ರೀಡೆ

ಐಪಿಎಲ್​ನಲ್ಲಿ ಬದಲಿ ಆಟಗಾರರ ಸೇರ್ಪಡೆ ನಿಯಮ ಪರಿಷ್ಕರಣೆ; ಹೀಗಿವೆ ಬದಲಾವಣೆಗಳು...

ಪ್ರಸಾದ್​ ಶೆಟ್ಟಿಗಾರ್​

ನವದೆಹಲಿ: ಐಪಿಎಲ್​ 18ನೇ ಆವೃತ್ತಿಯಲ್ಲಿ ಗಾಯ ಮತ್ತಿತರ ಕಾರಣಗಳಿಂದಾಗಿ ಅಲಭ್ಯರಾಗುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿಯಮಾವಳಿಯಲ್ಲಿ ಬಿಸಿಸಿಐ ಕೆಲ ಪ್ರಮುಖ ಪರಿಷ್ಕರಣೆಗಳನ್ನು ಮಾಡಿದೆ. ಇದರನ್ವಯ ತಂಡಗಳು ಇನ್ನು ಎರಾಬಿರ್ರಿಯಾಗಿ ಬದಲಿ ಆಟಗಾರರನ್ನು ಸೇರ್ಪಡೆಗೊಳಿಸುವಂತಿಲ್ಲ. ಜತೆಗೆ ಬದಲಿ ಆಟಗಾರರ ಸೇರ್ಪಡೆಗೆ ಸಂಬಂಧಿಸಿದಂತೆ ತಂಡಗಳಿಗೆ ಕೆಲ ಅನುಕೂಲಗಳನ್ನೂ ಕಲ್ಪಿಸಲಾಗಿದೆ.

ಐಪಿಎಲ್​ನಲ್ಲಿ ಈ ಮುನ್ನ ಟೂರ್ನಿ ಆರಂಭಗೊಂಡ ನಂತರ ಪ್ರತಿ ತಂಡ ಆರಂಭಿಕ 7 ಲೀಗ್​ ಪಂದ್ಯಗಳನ್ನು ಆಡುವವರೆಗೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿತ್ತು. ಅದನ್ನು ಈ ಬಾರಿ 12ನೇ ಲೀಗ್​ ಪಂದ್ಯದವರೆಗೂ ವಿಸ್ತರಿಸಲಾಗಿದೆ. ಇದರಿಂದ ಆಟಗಾರನೊಬ್ಬ 12ನೇ ಲೀಗ್​ ಪಂದ್ಯದ ವೇಳೆ ಗಾಯಗೊಂಡರೂ ಆತನ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಲಭಿಸಲಿದೆ.

ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿರುವ ಆಟಗಾರರನ್ನು ಮಾತ್ರ ಬದಲಿ ಆಟಗಾರರನ್ನಾಗಿ ತಂಡಗಳು ಸೇರ್ಪಡೆಗೊಳಿಸಲು ಅವಕಾಶವಿದೆ. ಹರಾಜಿನಲ್ಲಿ ಸೇಲಾಗದ ಆಟಗಾರ ನಂತರ ಐಪಿಎಲ್​ ವೇಳೆ ನೆಟ್​ ಬೌಲರ್​ ಆಗಿದ್ದರೆ, ಆತನನ್ನು ಬದಲಿ ಆಟಗಾರನನ್ನಾಗಿ ಸೇರಿಸಿಕೊಳ್ಳುವಾಗ, ಆತನನ್ನು ನೆಟ್​ ಬೌಲರ್​ ಆಗಿ ಬಳಸಿಕೊಳ್ಳುತ್ತಿರುವ ತಂಡ ಆಕ್ಷೇಪವೆತ್ತಲು ಅಥವಾ ಆತನನ್ನು ಬಿಟ್ಟುಕೊಡಲು ನಿರಾಕರಿಸುವಂತಿಲ್ಲ ಎಂದೂ ಹೊಸ ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬದಲಿ ಆಟಗಾರ ಟೂರ್ನಿಯ ನಡುವೆ ಸೇರ್ಪಡೆಗೊಂಡರೂ, ಆತನನ್ನು ಶೇ. 100 ಲಭ್ಯತೆ ಎಂದೇ ಪರಿಗಣಿಸಿ, ಹರಾಜಿಗೆ ನೋಂದಾಯಿಸಿದ್ದ ಮೂಲಬೆಲೆಯನ್ನೇ ಆತನಿಗೆ ಸಂಭಾವನೆಯಾಗಿ ನೀಡಬೇಕು ಎಂದೂ ತಿಳಿಸಲಾಗಿದೆ. ಈ ಸಲ ಬದಲಿ ಆಟಗಾರನನ್ನಾಗಿ ಸೇರಿಸಿಕೊಂಡ ಆಟಗಾರನನ್ನು 2026 ಮತ್ತು 2027ರ ಆವೃತ್ತಿಗೂ ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಆಗ ತಂಡವೊಂದರ ಗರಿಷ್ಠ ಆಟಗಾರರ ಸಂಖ್ಯೆ 25ರೊಳಗೆ ಇರಲೇಬೇಕಾಗುತ್ತದೆ. ಬದಲಿ ಆಟಗಾನನ್ನು 26ನೇ ಆಟಗಾರನನ್ನಾಗಿ ಉಳಿಸಿಕೊಳ್ಳಲು ಅವಕಾಶವಿರುವುದಿಲ್ಲ.

ಆಟಗಾರನೊಬ್ಬ ಗಾಯಗೊಂಡಾಗ ಆತ ಪ್ಲೇಆ್​ ಸಹಿತ ಟೂರ್ನಿಯ ಇನ್ನುಳಿದ ಎಲ್ಲ ಪಂದ್ಯಗಳಿಗೆ ಲಭ್ಯನಾಗುವುದಿಲ್ಲ ಎಂದು ಬಿಸಿಸಿಐ ನಾಮನಿರ್ದೇಶಿತ ವೈದ್ಯರು ಖಚಿತಪಡಿಸಿದರೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಬದಲಿ ಆಟಗಾರನಿಗೆ ಹೆಚ್ಚಿನ ಸಂಭಾವನೆ ನೀಡುವಂತಿಲ್ಲ!

ಗಾಯ ಅಥವಾ ಬೇರಾವುದೇ ಕಾರಣದಿಂದ ಟೂರ್ನಿಯಿಂದ ಹೊರಬಿದ್ದ ಆಟಗಾರ ಪಡೆಯುವ ಸಂಭಾವನೆಗಿಂತ ಅಧಿಕ ಮೊತ್ತಕ್ಕೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವಂತಿಲ್ಲ ಎಂದೂ ಬಿಸಿಸಿಐ ಈ ಬಾರಿ ನಿಯಮ ಪರಿಷ್ಕರಣೆ ಮಾಡಿದೆ. ಕಳೆದ ಮೆಗಾ ಹರಾಜಿನಲ್ಲಿ ಕೆಕೆಆರ್​ ತಂಡ ವೇಗಿ ಉಮ್ರಾನ್​ ಮಲಿಕ್​ರನ್ನು 75 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಅವರು ಗಾಯದಿಂದ ಹೊರಬಿದ್ದಿರುವ ಕಾರಣ ಕೆಕೆಆರ್​, ಅವರ ಬದಲಿಗೆ ಅದಕ್ಕಿಂತ ಹೆಚ್ಚಿನ ಸಂಭಾವನೆ ನೀಡಿ ಬೇರೆ ಆಟಗಾರನನ್ನು ಸೇರಿಸಿಕೊಳ್ಳಲು ಅವಕಾಶವಿರಲಿಲ್ಲ. ಹೀಗಾಗಿ 75 ಲಕ್ಷ ರೂ. ಮೊತ್ತಕ್ಕೇ ಮತ್ತೋರ್ವ ವೇಗಿ ಚೇತನ್​ ಸಕಾರಿಯಾರನ್ನು ಸೇರಿಸಿಕೊಂಡಿದೆ. ಇನ್ನು ಇಂಗ್ಲೆಂಡ್​ನ ಬೆಡನ್​ ಕರ್ಸ್​ ಕಳೆದ ಮೆಗಾ ಹರಾಜಿನಲ್ಲಿ 1 ಕೋಟಿ ರೂ. ಮೊತ್ತಕ್ಕೆ ಸನ್​ರೈಸರ್ಸ್​ ಸೇರಿದ್ದರು. ಕರ್ಸ್​ ಗಾಯಗೊಂಡು ಹೊರಬಿದ್ದಾಗ ಸನ್​ರೈಸರ್ಸ್​ 75 ಲಕ್ಷ ರೂ.ಗೆ ದಣ ಆಫ್ರಿಕಾದ ವೇಗಿ ವಿಯಾನ್​ ಮುಲ್ಡರ್​ರನ್ನು ಸೇರಿಸಿಕೊಂಡಿದೆ.