ಕ್ರೀಡೆ

ದುಲೀಪ್​ ಟ್ರೋಫಿ 2ನೇ ಲೀಗ್​ ಪಂದ್ಯಗಳಿಗೆ ಆಟಗಾರರ ಬದಲಾವಣೆ; ಭಾರತ ಎ ತಂಡಕ್ಕೆ ಮಯಾಂಕ್​ ಸಾರಥ್ಯ

ಬೆಂಗಳೂರು: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡ ಬೆನ್ನಲ್ಲೇ, ದುಲೀಪ್​ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ 2ನೇ ಲೀಗ್​ ಪಂದ್ಯಗಳಿಗೆ ತಂಡಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಶುಭಮಾನ್​ ಗಿಲ್​, ಕನ್ನಡಿಗ ಕೆಎಲ್​ ರಾಹುಲ್​, ಕುಲದೀಪ್​ ಯಾದವ್​, ಧ್ರುವ ಜುರೆಲ್​ ಮತ್ತು ಆಕಾಶ್​ದೀಪ್​ ಭಾರತ ಎ ತಂಡದಿಂದ ಹೊರಬಿದ್ದಿದ್ದಾರೆ. ಗಿಲ್​ ಗೈರಿನಲ್ಲಿ ಕನ್ನಡಿಗ ಮಯಾಂಕ್​ ಅಗರ್ವಾಲ್​ ಭಾರತ ಎ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅಕ್ಷಯ್​ ನಾರಂಗ್​, ಸೈಕ್​ ರಶೀದ್​, ಶಮ್ಸ್​ ಮುಲಾನಿ ಬದಲಿ ಆಟಗಾರರಾಗಿ ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಫಿಟ್ನೆಸ್​ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಗೈರಾಗಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ 2ನೇ ಪಂದ್ಯಕ್ಕೆ ಭಾರತ ಎ ತಂಡಕ್ಕೆ ಮರಳಿದ್ದಾರೆ.

ದುಲೀಪ್​ ಟ್ರೋಫಿಯ 2ನೇ ಲೀಗ್​ ಪಂದ್ಯಗಳು ಅನಂತಪುರದಲ್ಲಿ ನಡೆಯಲಿದ್ದು, ಭಾರತ ಎ ತಂಡ ಶ್ರೇಯಸ್​ ಅಯ್ಯರ್​ ಸಾರಥ್ಯದ ಭಾರತ ಡಿ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಭಾರತ ಬಿ-ಸಿ ತಂಡಗಳು ಮುಖಾಮುಖಿ ಆಗಲಿವೆ.

ಟೆಸ್ಟ್​ ತಂಡಕ್ಕೆ ಮರಳಿದ ಹಿನ್ನೆಲೆಯಲ್ಲಿ ವಿಕೆಟ್​ ಕೀಪರ್​&ಬ್ಯಾಟರ್​ ರಿಷಭ್​ ಪಂತ್​ ಜತೆಗೆ ಇತರ ಟೆಸ್ಟ್​ ಆಟಗಾರರಾದ ಯಶಸ್ವಿ ಜೈಸ್ವಾಲ್​, ಸ್ರಾರ್ಜ್​ ಖಾನ್​, ಯಶ್​ ದಯಾಳ್​ ಭಾರತ ಬಿ ತಂಡದಿಂದ ಹೊರಬಿದ್ದಿದ್ದು, ರಿಂಕು ಸಿಂಗ್​, ಸುಯಶ್​ ಪ್ರಭುದೇಸಾಯಿ, ಹಿಮಾಂಶು ಮಂತ್ರಿ ಬದಲಿಗರಾಗಿ ಸೇರ್ಪಡೆಯಾಗಿದ್ದಾರೆ. ಭಾರತ ಡಿ ತಂಡದಲ್ಲಿ ಅಕ್ಷರ್​ ಪಟೇಲ್​ ಬದಲಿಗೆ ನಿಶಾಂತ್​ ಮತ್ತು ತುಷಾರ್​ ದೇಶಪಾಂಡೆ ಬದಲಿಗೆ ಕನ್ನಡಿಗ ವಿದ್ವತ್​ ಕಾವೇರಪ್ಪ ಸ್ಥಾನ ಪಡೆದಿದ್ದಾರೆ. ಭಾರತ ಸಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ 2ನೇ ಪಂದ್ಯಗಳಿಗೆ ಫಿಟ್​ ಆಗಿದ್ದಾರೆ ಎಂದು ವರದಿಯಾಗಿದ್ದರೂ, ದುಲೀಪ್​ ಟ್ರೋಫಿಯಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಪರಿಷ್ಕೃತ ತಂಡಗಳು:

ಭಾರತ ಎ: ಮಯಾಂಕ್​ ಅಗರ್ವಾಲ್​ (ನಾಯಕ), ರಿಯಾನ್​ ಪರಾಗ್​, ಅಕ್ಷಯ್​ ನಾರಂಗ್​, ಎಸ್​ಕೆ ರಶೀದ್​, ತಿಲಕ್​ ವರ್ಮ, ಶಿವಂ ದುಬೆ, ತನುಷ್​ ಕೋಟ್ಯಾನ್​, ಶಮ್ಸ್​ ಮುಲಾನಿ, ಪ್ರಸಿದ್ಧ ಕೃಷ್ಣ, ಖಲೀಲ್​ ಅಹ್ಮದ್​, ಆವೇಶ್​ ಖಾನ್​; ಕೋಚ್​ ಸುನೀಲ್​ ಜೋಷಿ;

ಭಾರತ ಬಿ: ಅಭಿಮನ್ಯು ಈಶ್ವರನ್​ (ನಾಯಕ), ರಿಂಕು ಸಿಂಗ್​, ನವದೀಪ್​ ಸೈನಿ, ವಾಷಿಂಗ್ಟನ್​ ಸುಂದರ್​, ಮುಕೇಶ್​ ಕುಮಾರ್​, ಸಾಯಿ ಕಿಶೋರ್​, ಮುಶೀರ್​ ಖಾನ್​, ನಿತೇಶ್​ ಕುಮಾರ್​ ರೆಡ್ಡಿ, ಸುಯಶ್​ ಪ್ರಭುದೇಸಾಯಿ, ರಾಹುಲ್​ ಚಹರ್​, ಎನ್​. ಜಗದೀಶನ್​, ಹಿಮಾಂಶು ಮಂತ್ರಿ; ಕೋಚ್​: ಸಿತಾಂಶು ಕೋಟಕ್​.