ನವದೆಹಲಿ: ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ನವದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಿಗದಿಯಾಗಿವೆ. ಶನಿವಾರದಿಂದ ಲೀಗ್ ಹಂತದ ಕೊನೇ ಚರಣದ ಪಂದ್ಯಗಳು ಕೂಡ ನವದೆಹಲಿಯಲ್ಲೇ ನಡೆಯಲಿವೆ. ಅಕ್ಟೋಬರ್ 31ರಂದು ಫೈನಲ್ ಪಂದ್ಯ ನಡೆಯಲಿದೆ.
ಅಕ್ಟೋಬರ್ 23ಕ್ಕೆ ಲೀಗ್ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 25ರಿಂದ ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಅ.25ಕ್ಕೆ ಅಂಕಪಟ್ಟಿಯಲ್ಲಿ 5ರಿಂದ 8ನೇ ಸ್ಥಾನ ಪಡೆದ ತಂಡಗಳು ಪ್ಲೇ-ಇನ್ ಪಂದ್ಯಗಳಲ್ಲಿ ಆಡಲಿವೆ. ಅ.26ಕ್ಕೆ ಮೊದಲ ಎಲಿಮಿನೇಟರ್ ಮತ್ತು ಮಿನಿ-ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಅ.27ಕ್ಕೆ ಎರಡನೇ ಎಲಿಮಿನೇಟರ್ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಅ.28ರಂದು ಮೂರನೇ ಎಲಿಮಿನೇಟರ್ ಮತ್ತು ಅ.29ಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿವೆ.
ಈ ಬಾರಿ ಹೊಸ ಸ್ವರೂಪದಲ್ಲಿ ಟೂರ್ನಿ ನಡೆಯುತ್ತಿದ್ದು, ಎಲ್ಲ 12 ತಂಡಗಳು ತಲಾ 18 ಲೀಗ್ ಪಂದ್ಯಗಳನ್ನು ಆಡಿದ ಬಳಿಕ ಅಂಕಪಟ್ಟಿಯ ಅಗ್ರ 8 ತಂಡಗಳು ಪ್ರಶಸ್ತಿ ರೇಸ್ನಲ್ಲಿ ಉಳಿದುಕೊಳ್ಳಲಿವೆ. ಅಂಕಪಟ್ಟಿಯ ಅಗ್ರ 2 ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಸೆಣಸಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್ಗೇರಿದರೆ, ಸೋತ ತಂಡ ಸೆಮಿಫೈನಲ್ ಮಾದರಿಯ 2ನೇ ಕ್ವಾಲಿಫೈಯರ್ನಲ್ಲಿ ಆಡಲಿದೆ.