ಕ್ರೀಡೆ

ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಮೂರನೇ ಗೆಲುವು

ಚೆನ್ನೈ: ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ. ಬೆಂಗಳೂರು ತಂಡ ಭಾನುವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್​ ಎದುರು 33-31 ಅಂತರದಿಂದ ಗೆಲುವು ದಾಖಲಿಸಿತು. ಇದು ಬೆಂಗಳೂರು ಬುಲ್ಸ್​​ಗೆ ಟೂರ್ನಿಯಲ್ಲಿ 3ನೇ ಗೆಲುವು ಮತ್ತು ತವರಿನಿಂದ ಹೊರಗೆ ಮೊದಲ ಗೆಲುವಾಗಿದೆ.

ಎಸ್​ಡಿಎಟಿ ಮಲ್ಟಿ ಪರ್ಪಸ್​ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೆ$ ಚರಣದಲ್ಲಿ ಬೆಂಗಳೂರು ತಂಡ ಮೊದಲಾರ್ಧದಲ್ಲೇ 16-12ರಿಂದ ಮುನ್ನಡೆ ಸಾಧಿಸಿತು. ನಂತರ ಪವನ್​ ಶೆರಾವತ್​ (13) ಭರ್ಜರಿ ರೈಡಿಂಗ್​ ನಡುವೆ ಜಯ ಒಲಿಸಿಕೊಂಡಿತು. ಭರತ್​ (6), ವಿಕಾಸ್​ ಕಂಡೋಲ (5), ಸುರ್ಜಿತ್​ ಸಿಂಗ್​ (7) ಬುಲ್ಸ್​ ಗೆಲುವಿಗೆ ನೆರವಾದರು.

ಮುಂಬಾಗೆ ಮಣಿದ ಬೆಂಗಾಲ್​: ಯು ಮುಂಬಾ ತಂಡ ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಎದುರು 39-37 ಅಂತರದಿಂದ ಗೆಲುವು ದಾಖಲಿಸಿತು. ಬೆಂಗಾಲ್​ ನಾಯಕ ಮಣಿಂದರ್​ ಸಿಂಗ್​ (11) ಹೋರಾಟ ವ್ಯರ್ಥಗೊಂಡಿತು. ಮೊದಲಾರ್ಧದಲ್ಲಿ ಮುಂಬಾ 18-15ರಿಂದ ಮುನ್ನಡೆ ಸಾಧಿಸಿತು. ದ್ವೀತಿಯಾರ್ಧದಲ್ಲಿ ಬೆಂಗಾಲ್​ ಜಿದ್ದಾಜಿದ್ದಿನ ಹೋರಾಟ ನಡುವೆ ಪರಾಭವಗೊಂಡಿತು.