ಕ್ರೀಡೆ

ಬಾಬರ್​ ಅಜಮ್​ಗೆ ಮತ್ತೆ ಪಾಕ್​ ನಾಯಕತ್ವ ಸಾಧ್ಯತೆ; ಹೀಗಿದೆ ಕಾರಣ...

ಲಾಹೋರ್​: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ನಾಯಕತ್ವದಿಂದ ವಜಾಗೊಂಡಿದ್ದ ಬಾಬರ್​ ಅಜಮ್​ ಪಾಕಿಸ್ತಾನ ತಂಡದ ನಾಯಕರಾಗಿ ಮರುನೇಮಕಗೊಳ್ಳುವ ಸಾಧ್ಯತೆ ಇದೆ.

ಶಹೀನ್​ ಷಾ ಅಫ್ರಿದಿಗೆ ಸೀಮಿತ ಓವರ್​ ತಂಡ ಮತ್ತು ಶಾನ್​ ಮಸೂದ್​ಗೆ ಟೆಸ್ಟ್​ ತಂಡದ ನಾಯಕತ್ವ ನೀಡಿದ ಪ್ರಯೋಗ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಯು-ರ್ಟನ್​ ಹೊಡೆಯಲಿದೆ ಎನ್ನಲಾಗಿದೆ.

ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ತಂಡ ಟೆಸ್ಟ್​ ಸರಣಿಯಲ್ಲಿ 0-3ರಿಂದ ಸೋತಿದ್ದರೆ, ನ್ಯೂಜಿಲೆಂಡ್​ನಲ್ಲಿ ಆಡಿದ ಟಿ20 ಸರಣಿಯಲ್ಲಿ 1-4ರಿಂದ ಸೋಲು ಅನುಭವಿಸಿತ್ತು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಬಾಬರ್ ಅಜಮ್​ ಅವರೇ ತಂಡವನ್ನು ಮುನ್ನಡೆಸಲು ಸೂಕ್ತ ಎಂಬ ನಿರ್ಧಾರಕ್ಕೆ ಪಿಸಿಬಿ ಬಂದಿದೆ ಎನ್ನಲಾಗಿದೆ. ಪಾಕಿಸ್ತಾನ ತಂಡದ ಎಲ್ಲ ಆಟಗಾರರು ಇನ್ನು ಫೆಬ್ರವರಿ 17ರಿಂದ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಆಡಲಿದ್ದಾರೆ. ನಂತರದಲ್ಲಿ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿ ಆಡಲಿದ್ದರೆ, ಜೂನ್​ನಲ್ಲಿ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಅದಕ್ಕೆ ಮುನ್ನ ಬಾಬರ್​ ಮರುನೇಮಕ ನಿರೀಕ್ಷಿಸಲಾಗಿದೆ.