ಕ್ರೀಡೆ

Champions Trophy ಪಂದ್ಯದಲ್ಲಿ ಮತ್ತೊಮ್ಮೆ ಭದ್ರತಾ ಲೋಪ; ಪಿಸಿಬಿ ವಿರುದ್ಧ ಕೇಳಿ ಬಂತು ಗಂಭೀರ ಆರೋಪ

ಲಾಹೋರ್​: ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 08ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ರೋಚಕ ಜಯ ಸಾಧಿಸಿದ್ದು, ಇಂಗ್ಲೆಂಡ್ ತಂಡವನ್ನು ಟೂರ್ನಿಯಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದೆ. ಇನ್ನೂ ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭವಾಗುವುದಕ್ಕೂ ಮುಂಚಿನಿಂದಲೂ ಟೂರ್ನಿಗೆ ಉಗ್ರರಿಂದ ಬೆದರಿಕೆ ಇರುವ ಕುರಿತು ವರದಿಗಳು ಪ್ರಕಟವಾಗುತ್ತಿವೆ. ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಉಂಟಾದ ಭದ್ರತಾ ಲೋಪದ ಪ್ರಕರಣ ಮಾಸುವ ಮುನ್ನವೇ ಇದೀಗ ಲಾಹೋರ್​ನಲ್ಲಿ ಕೂಡ ಅದೇ ರೀತಿಯ ಘಟನೆ ನಡೆದಿದ್ದು, ಪಾಕಿಸ್ತಾನದಲ್ಲಿ ಭದ್ರತೆಯ ಕುರಿತಾದ ಪ್ರಶ್ನೆಗಳನ್ನು ಉದ್ಭವಿಸಲು ಶುರುವಾಗಿದೆ.

ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದಲ್ಲಿ ಭದ್ರತಾ ಲೋಪವಾಗಿದ್ದು, ಪಾಕಿಸ್ತಾನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಪ್ರೇಕ್ಷಕರೊಬ್ಬರು ಮೈದಾನಕ್ಕೆ ನುಗ್ಗಿದ್ದು, ಅಫ್ಘಾನಿಸ್ತಾನದ ಆಟಗಾರರನ್ನು ತಬ್ಬಿಕೊಳ್ಳಲು ಮುಂದಾಗಿದ್ದಾರೆ. ಕೂಡಲೇ ವ್ಯಕ್ತಿಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದು, ಆತನನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಪಿಸಿಬಿಯ ಹಿರಿಯ ಸದಸ್ಯರೊಬ್ಬರು, ಪ್ರೇಕ್ಷಕರೊಬ್ಬರು ಮೈದಾನಕ್ಕೆ ನುಗ್ಗಿರುವ ಘಟನೆಯನ್ನು ಪಿಸಿಬಿ ಗಂಭೀರವಾಗಿ ಪರಿಗಣಿಸಿದ್ದು, ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಮೈದಾನಕ್ಕೆ ನುಗ್ಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದೆ. ಇದಲ್ಲದೆ ಆತನಿಗೆ ಪಾಕಿಸ್ತಾನದ ಎಲ್ಲಾ ಕ್ರಿಕೆಟ್ ಸ್ಥಳಗಳಿಗೆ ಪ್ರವೇಶಿಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ಪಿಸಿಬಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇದೇ ಮೊದಲಲ್ಲ 

ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದ ಸಂದರ್ಭದಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಕ್ಷದ ನಾಯಕ ಸಾದ್ ರಿಝ್ವಿಯ ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರನ್ನು ಅಪ್ಪಿಕೊಂಡ ಘಟನೆ ನಡೆದಿದೆ. ಇದರಿಂದ ರಚಿನ್ ರವೀಂದ್ರ ಭಯಭೀತರಾದರು. ಅಷ್ಟರಲ್ಲಾಗಲೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿಗಳು ಯುವಕನನ್ನು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದಾರೆ.

ಮೈದಾನಕ್ಕೆ ಮುಗ್ಗಿದ್ದ ವ್ಯಕ್ತಿ 2021ರಲ್ಲಿ ನಿಷೇಧಿತ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಬೆಂಬಲಿಗ ಎಂಬುದು ಗೊತ್ತಾಗಿದೆ. ಈ ವ್ಯಕ್ತಿ ರಚಿನ್ ರವೀಂದ್ರ ಅವರನ್ನು ಹಿಂದಿನಿಂದ ತಬ್ಬಿಕೊಂಡು ಟಿಎಲ್‌ಪಿ ನಾಯಕ ಸಾದ್ ರಿಜ್ವಿ ಚಿತ್ರವನ್ನು ಪ್ರದರ್ಶಿಸಿದ್ದಾನೆ. ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವರದಿಗಳ ನಡುವೆ ಈ ಘಟನೆ ನಡೆದಿದ್ದು, ಇದು ಭದ್ರತಾ ವೈಫಲ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜತೆಗೆ ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯವೈಖರಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಪ್ರಹಾರವೇ ವ್ಯಕ್ತವಾಗುತ್ತಿದೆ.