ಕ್ರೀಡೆ

ಪಾಕ್​ಗೆ ಬರೋಬ್ಬರಿ 38 ಕೋಟಿ ರೂ. ಸಿಗಲಿದೆ: ಅಚ್ಚರಿ ವಿಷಯ ಬಿಚ್ಚಿಟ್ಟ ಭಾರತದ ಮಾಜಿ ಕ್ರಿಕೆಟಿಗ | Champions Trophy

ಮೋಹನ್​ ಶೆಟ್ಟಿ

Champions Trophy: ಟೀಮ್ ಇಂಡಿಯಾ ಮತ್ತು ಆತಿಥೇಯ ಪಾಕಿಸ್ತಾನದ ನಡುವೆ ಉಂಟಾಗಿದ್ದ 2025ರ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಜಟಾಪಟಿಗೆ ಇದೀಗ ಮುಕ್ತಾಯ ಹಾಡಲಾಗಿದ್ದೇ ಆದರೂ ಒಂದಷ್ಟು ವಿಷಯ ಬೂದಿ ಮುಚ್ಚಿದ ಕೆಂಡದಂತಿದೆ. ಟೀಮ್ ಇಂಡಿಯಾವನ್ನು ಹೇಗಾದರೂ ಮಾಡಿ ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಪಿಸಿಬಿ ನಡೆಸಿದ ಎಲ್ಲಾ ಪ್ರಯತ್ನಗಳು ಇದೀಗ ಸಂಪೂರ್ಣ ವಿಫಲವಾಗಿವೆ. ಅಂತಿಮವಾಗಿ ಬಿಸಿಸಿಐ ಉದ್ದೇಶ ಈಡೇರಿದ್ದು, ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ಹೈಬ್ರಿಡ್​ ಮಾದರಿಯಲ್ಲಿ ನಡೆಸುವುದಾಗಿ ಪಿಸಿಬಿ ತಿಳಿಸಿದೆ.

ಆರ್ಥಿಕ ನಷ್ಟವಿಲ್ಲ

ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಟೀಮ್ ಇಂಡಿಯಾ ಭಾರತದ ಗಡಿದಾಟಿ ಬರುವಂತೆ ಹೂಡಿದ್ದ ಪ್ಲ್ಯಾನ್​ಗಳು​ ತಲೆಕೆಳಗಾದ ವಿಷಯಕ್ಕೆ ತೀವ್ರ ಅಸಮಾಧಾನ ಹೊರಹಾಕಿತು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಒಂದು ಸುದ್ದಿ ಸದ್ಯ ಭಾರೀ ಗೊಂದಲ ಹುಟ್ಟುಹಾಕಿದೆ. ಟೀಮ್ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳಿಸಲು ಒಪ್ಪದ ಬಿಸಿಸಿಐ ನಿರ್ಧಾರದಿಂದ ಕೆಂಡಾಮಂಡಲಗೊಂಡಿರುವ ಪಾಕ್​, ಹೈಬ್ರಿಡ್​ ಮಾಡೆಲ್​ ಆಡುವುದರಿಂದ ತಮಗೆ ನಷ್ಟ ಉಂಟಾಗಲಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ಆಕಾಶ್​ ಚೋಪ್ರಾ, "ಇಲ್ಲ. ಆ ರೀತಿ ಏನಿಲ್ಲ. ಹೈಬ್ರಿಡ್​ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಒಪ್ಪಿಗೆ ಸೂಚಿಸಿದ ಹಿನ್ನೆಲೆ ಪಾಕ್​ ಐಸಿಸಿಯಿಂದ ಸುಮಾರು 38.2 ಕೋಟಿ ರೂ. ಹೆಚ್ಚುವರಿ ಹಣವನ್ನು ನಷ್ಟಕ್ಕೆ ಪರಿಹಾರವಾಗಿ ಸ್ವೀಕರಿಸಲಿದೆ. ಹೈಬ್ರಿಡ್ ಮಾದರಿ ಒಪ್ಪಿಕೊಳ್ಳುವ ಮೂಲಕ ಪಿಸಿಬಿಗೆ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ" ಎಂದು ಆಕಾಶ್​ ಹೇಳಿದ್ದಾರೆ,(ಏಜೆನ್ಸೀಸ್).