ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರ ಕ್ರಿಕೆಟ್ ಅಕಾಡೆಮಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ಎರಡನೇ ಅಲೆಗೆ ದೇಶ ತತ್ತರಿಸಿರುವ ಸಮಯದಲ್ಲಿ ಒಟ್ಟಾಗಿ ನಿಲ್ಲುವುದು ಮತ್ತು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪಠಾಣ್ಸ್ ಕ್ರಿಕೆಟ್ ಅಕಾಡೆಮಿಯಿಂದ (ಸಿಎಪಿ) ದಕ್ಷಿಣ ದೆಹಲಿಯಲ್ಲಿ ಕೋವಿಡ್-19ರಿಂದ ತೊಂದರೆಗೆ ಒಳಗಾಗಿರುವವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಇರ್ಫಾನ್ ಪಠಾಣ್ ಟ್ವೀಟಿಸಿದ್ದಾರೆ.
ಭಾರತ ಪರ 29 ಟೆಸ್ಟ್ ಮತ್ತು 120 ಏಕದಿನ ಪಂದ್ಯಗಳನ್ನು ಆಡಿರುವ 36 ವರ್ಷದ ಇರ್ಫಾನ್ ಪಠಾಣ್ ಕಳೆದ ಮಾರ್ಚ್ನಲ್ಲಿ ಕರೊನಾ ಸೋಂಕಿತರಾಗಿದ್ದರು. ರಾಯ್ಪುರದಲ್ಲಿ ರಸ್ತೆ ಸುರಕ್ಷತಾ ವಿಶ್ವ ಸರಣಿಯಲ್ಲಿ ಆಡಿದ ಬಳಿಕ ಪಾಸಿಟಿವ್ ಆಗಿದ್ದ ಅವರು ಬಳಿಕ ಗುಣಮುಖರಾಗಿ ಐಪಿಎಲ್ನಲ್ಲಿ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಕರೊನಾ ಹಾವಳಿಯ ಸಮಯದಲ್ಲಿ ಇರ್ಫಾನ್ ಮತ್ತು ಯೂಸುಫ್ ಪಠಾಣ್ ಸಹೋದರರು ಸುಮಾರು 4 ಸಾವಿರ ಮಾಸ್ಕ್ ಕೊಡುಗೆ ನೀಡಿದ್ದರು.