ಪ್ಯಾರಿಸ್: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಮೊದಲ 3 ಸ್ಥಾನ ಪಡೆಯುವ ಕ್ರೀಡಾಪಟುಗಳ ಕೊರಳಿಗೆ ಹಾಕಲಾಗುವ ಪದಕಗಳಲ್ಲಿ ಬರೀ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಕಬ್ಬಿಣವೂ ಇರಲಿದೆ! ಆದರೆ ಇದು ಅಂತಿಂಥ ಕಬ್ಬಿಣವಲ್ಲ. ಪ್ಯಾರಿಸ್ ನಗರದ ಜಗದ್ವಿಖ್ಯಾತ ಐಫೆಲ್ ಟವರ್ನ ಕಬ್ಬಿಣದ ತುಂಡುಗಳಾಗಿವೆ! ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್ನಲ್ಲಿ ನಡೆಯಲಿರುವ 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟದ ವಿಜೇತರಿಗೆ ನೀಡಲಾಗುವ ಪದಕಗಳ ಕ್ರಾಂತಿಕಾರಿ ವಿನ್ಯಾಸವನ್ನು ಗುರುವಾರ ಸಂಟಕರು ಅನಾವರಣಗೊಳಿಸಿದರು.
ಫ್ರೆಂಚ್ ಕ್ರಾಂತಿಯ 100ನೇ ವರ್ಷಾಚರಣೆಯ ಅಂಗವಾಗಿ 1889ರಲ್ಲಿ "ವರ್ಲ್ಡ್ಸ್ ಫೇರ್' ಉತ್ಸವದ ವೇಳೆ 18,038 ಕಬ್ಬಿಣದ ಭಾಗಗಳಿಂದ 330 ಮೀಟರ್ (1,083 ಅಡಿ) ಎತ್ತರದ ಟವರ್ ನಿರ್ಮಿಸಲಾಗಿತ್ತು. ಇಂಜಿನಿಯರ್ ಗುಸ್ಟವ್ ಐಫೆಲ್ 20 ವರ್ಷಗಳ ಬಾಳಿಕೆಗಾಗಿ ಈ ಟವರ್ ನಿರ್ಮಿಸಿದ್ದರು. ಆದರೆ ಕಾಲಕಾಲಕ್ಕೆ ಇದರ ನವೀಕರಣ ಕೆಲಸಗಳನ್ನು ಮಾಡುತ್ತ ಬಂದಿರುವ ಕಾರಣ ಇದೀಗ ಐಫೆಲ್ ಟವರ್ 135ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಟವರ್ ಈಗಾಗಲೆ 2 ಪ್ಯಾರಿಸ್ ಒಲಿಂಪಿಕ್ಸ್ಗಳನ್ನೂ (1900, 1924) ನೋಡಿದೆ.
ಐಫೆಲ್ ಟವರ್ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅವುಗಳನ್ನು ಈಗ ಒಲಿಂಪಿಕ್ಸ್ ಪದಕಗಳಲ್ಲಿ ಬಳಸಲಾಗುತ್ತಿದೆ. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿರಲಿದೆ. ಪದಕಗಳ ಹೊರಮುಖದಲ್ಲಿ ಜೋಡಿಸಲಾದ ಷಡ್ಭುಜಾಕೃತಿಯ ಈ ಕಬ್ಬಿಣದ ತುಂಡುಗಳಿಗೆ ಪಾಲಿಶ್ ಹಾಕಲಾಗಿದ್ದು, "ಪ್ಯಾರಿಸ್ 2024' ಎಂದು ಅದರ ಮೇಲೆ ಬರೆಯಲಾಗಿದೆ. ಜತೆಗೆ ಪ್ಯಾರಿಸ್ ಒಲಿಂಪಿಕ್ಸ್ ಲಾಂಛನ ಮತ್ತು ಒಲಿಂಪಿಕ್ಸ್ ರಿಂಗ್ಗಳೂ ಇದರ ಮೇಲೆ ಮುದ್ರಿಸಲ್ಪಟ್ಟಿವೆ. ಫ್ರಾನ್ಸ್ ದೇಶದ ನೆ ಷಡ್ಭುಜಾಕೃತಿಯಲ್ಲಿದೆ. ಹೀಗಾಗಿ ಕಬ್ಬಿಣದ ತುಂಡನ್ನು ಅದೇ ರೀತಿ ವಿನ್ಯಾಸಗೊಳಿಸಲಾಗಿದೆ. ಪ್ಯಾರಿಸ್ ಜ್ಯುವೆಲ್ಲರಿ ಹೌಸ್ "ಚೌಮೆಟ್' ಈ ಪದಕಗಳನ್ನು ವಿನ್ಯಾಸಗೊಳಿಸಿದೆ.
ಒಲಿಂಪಿಕ್ಸ್ ಪದಕಗಳ ಬೆನ್ನಹಿಂದೆ, 1928ರಿಂದ ಇದುವರೆಗಿನ ಎಲ್ಲ ಒಲಿಂಪಿಕ್ಸ್ ಪದಕಗಳಲ್ಲಿರುವಂತೆ ಗ್ರೀಕ್ ಪ್ರಾಚಿನ ವಿಜಯ ದೇವತೆ "ನೈಕ್' ಚಿತ್ರವಿರಲಿದೆ. ಜತೆಗೆ ಐೆಲ್ ಟವರ್ ಚಿತ್ರವನ್ನೂ ಸಣ್ಣದಾಗಿ ಮುದ್ರಿಸಲಾಗಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 8ರವರೆಗೆ ಪ್ಯಾರಿಸ್ನಲ್ಲೇ ನಡೆಯಲಿರುವ ಪ್ಯಾರಾಲಿಂಪಿಕ್ಸ್ನಲ್ಲೂ ಇದೇ ರೀತಿಯ ವಿನ್ಯಾಸದ ಪದಕಗಳನ್ನು ವಿತರಿಸಲಾಗುತ್ತದೆ.
5,084: ಪ್ಯಾರಿಸ್ ಗೇಮ್ಸ್ಗಾಗಿ ಒಟ್ಟು 5,084 ಪದಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಪೈಕಿ 2,600 ಒಲಿಂಪಿಕ್ಸ್ ಮತ್ತು 2,400 ಪ್ಯಾರಾಲಿಂಪಿಕ್ಸ್ನಲ್ಲಿ ವಿತರಣೆಯಾಗಲಿವೆ. ಎಂದಿನಂತೆ ಅಗತ್ಯಕ್ಕಿಂತ ಸ್ವಲ್ಪ ಅಧಿಕ ಪದಕಗಳನ್ನೇ ತಯಾರಿಸಲಾಗುತ್ತಿದೆ.
*ಒಲಿಂಪಿಕ್ಸ್ ಪದಕಗಳಿಗೆ ನಾವು ಫ್ರೆಂಚ್ ಟಚ್ ನೀಡಲು ಬಯಸಿದ್ದೆವು. ಹೀಗಾಗಿ ಅದರೊಂದಿಗೆ ಐಫೆಲ್ ಟವರ್ಅನ್ನು ಜೋಡಿಸಲು ಯೋಚಿಸಿದೆವು. ಐಫೆಲ್ ಟವರ್ ಆಪರೇಟಿಂಗ್ ಕೋ.ಅನ್ನು ನಾವು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡರು. ಆಗ ನಮ್ಮ ಕನಸು ನನಸಾಯಿತು. ಈ ಕಬ್ಬಿಣದ ತುಂಡುಗಳು ಇತಿಹಾಸದ ಭಾಗವೂ ಆಗಿವೆ.
| ಜೋಕಿಮ್ ರಾಂನ್ಸಿನ್, ಪ್ಯಾರಿಸ್ ಗೇಮ್ಸ್ ಸಂಘಟನಾ ಸಮಿತಿ ಮುಖ್ಯಸ್ಥ
ಚಿನ್ನದ ಪದಕದಲ್ಲಿ 6 ಗ್ರಾಂ ಚಿನ್ನ!
ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದವರಿಗೆ ನೀಡಲಾಗುವ ಚಿನ್ನದ ಪದಕವೊಂದು 529 ಗ್ರಾಂ ಭಾರವಿರುತ್ತದೆ ಮತ್ತು ಇದು ಸಂಪೂರ್ಣವಾಗಿ ಚಿನ್ನದ್ದಾಗಿರುವುದಿಲ್ಲ. ಬೆಳ್ಳಿಯಿಂದ ಮಾಡಿದ ಪದಕಕ್ಕೆ 6 ಗ್ರಾಂ ಚಿನ್ನವನ್ನು ಲೇಪಿಸಲಾಗುತ್ತದೆ. ಬೆಳ್ಳಿ ಪದಕ 525 ಗ್ರಾಂ ಭಾರವಿದ್ದರೆ, ಕಂಚಿನ ಪದಕ 455 ಗ್ರಾಂ ಇರುತ್ತದೆ ಮತ್ತು ಇದು ತಾಮ್ರ, ತವರ ಮತ್ತು ಸತು ಮಿಶ್ರಲೋಹದಿಂದ ಕೂಡಿರುತ್ತದೆ. ಪದಕಗಳು 85 ಮಿಲಿಮೀಟರ್ ಅಗಲ ಮತ್ತು 9.2 ಮಿಲಿಮೀಟರ್ ದಪ್ಪವಿದೆ. ಪದಕಗಳ ತಯಾರಿಕೆಯ ನಗದು ಮೌಲ್ಯ ಎಷ್ಟೆಂದು ಸಂಘಟಕರು ಬಹಿರಂಗಪಡಿಸಿಲ್ಲ.