ಕ್ರೀಡೆ

ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಕ್ರಿಕೆಟಿಗ ರಿಷಭ್​ ಪಂತ್​ ನೆರವು

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಕೈಜೋಡಿಸಿದ್ದು, ಆಕ್ಸಿಜನ್​ ಸಿಲಿಂಡರ್​, ಬೆಡ್​ ಮತ್ತು ಕರೊನಾ ಕಿಟ್​ಗಳ ಖರೀದಿಗಾಗಿ ಗೌಪ್ಯ ಮೊತ್ತವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಗುರುಗ್ರಾಮ ಮೂಲದ ಎನ್​ಜಿಒ ಸಂಸ್ಥೆ ಹೇಮಕುಂಟ್ ಫೌಂಡೇಷನ್​ಗೆ ಈ ಮೊತ್ತವನ್ನು ನೀಡುವುದಾಗಿ 23 ವರ್ಷದ ಪಂತ್​ ಹೇಳಿದ್ದಾರೆ.

ಹೇಮಕುಂಟ್​ ಫೌಂಡೇಷನ್​ಗೆ ಬೆಡ್​ ಸಹಿತ ಆಕ್ಸಿಜನ್​ ಬೆಡ್​ ಒದಗಿಸಲು ನಾನು ಹಣಕಾಸು ನೆರವು ನೀಡುತ್ತಿರುವೆ. ಅಲ್ಲದೆ ದೇಶದೆಲ್ಲೆಡೆ ಕೋವಿಡ್​ನಿಂದ ಬಳಲುತ್ತಿರುವವರಿಗೆ ಕೋವಿಡ್​ ಪರಿಹಾರ ಕಿಟ್​ ಒದಗಿಸಲು ಕೂಡ ನೆರವಾಗುತ್ತಿರುವೆ ಎಂದು ರಿಷಭ್​ ಪಂತ್​ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಕರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ವಿಶ್ರಾಂತಿ ರಹಿತ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ. ಒಗ್ಗಟ್ಟಿನ ಶಕ್ತಿ ಏನೆಂಬುದನ್ನು ನಾನು ಕ್ರೀಡೆಯಿಂದ ಅರಿತುಕೊಂಡಿರುವೆ ಎಂದು ಇತ್ತೀಚೆಗೆ ಅರ್ಧಕ್ಕೆ ಸ್ಥಗಿತಗೊಂಡ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಿದ್ದ ಪಂತ್​ ಹೇಳಿದ್ದಾರೆ. ಎಲ್ಲರೂ ಮನೆಯಲ್ಲೇ ಇರಿ ಮತ್ತು ಸುರತವಾಗಿರಿ ಎನ್ನುವ ಜತೆಗೆ ಪಂತ್​, ಸಾಧ್ಯವಾದಾಗ ಎಲ್ಲರೂ ವ್ಯಾಕ್ಸಿನ್​ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.

ಈ ಮುನ್ನ ವಿರಾಟ್​ ಕೊಹ್ಲಿ, ಶಿಖರ್​ ಧವನ್​, ಜೈದೇವ್​ ಉನಾದ್ಕತ್​, ಹಾರ್ದಿಕ್​​ ಪಾಂಡ್ಯ ಮತ್ತು ಪ್ಯಾಟ್​ ಕಮ್ಮಿನ್ಸ್​ ಸಹಿತ ಹಲವು ಕ್ರಿಕೆಟಿಗರು ಭಾರತದ ಕರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದರು.