ಕ್ರೀಡೆ

28ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ ಬೆಂಗಳೂರಿನ ಬಿಲಿಯರ್ಡ್ಸ್​​ ತಾರೆ ಪಂಕಜ್​ ಆಡ್ವಾಣಿ!

ನವದೆಹಲಿ: ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್​ ಆಡ್ವಾಣಿ ಐತಿಹಾಸಿಕ 28ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ್ದಾರೆ. ಬೆಂಗಳೂರಿನ ಪಂಕಜ್​ ಆಡ್ವಾಣಿ ದೋಹಾದಲ್ಲಿ ನಡೆದ ಐಬಿಎಸ್​ಎ್​ ವಿಶ್ವ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​ನಲ್ಲಿ ಇಂಗ್ಲೆಂಡ್​ನ ರಾರ್ಬಟ್​ ಹಾಲ್​ ವಿರುದ್ಧ 4&2 ಅಂತರದಿಂದ ಗೆಲುವು ದಾಖಲಿಸುವ ಮೂಲಕ ಈ ಸಾಧನೆ ಮಾಡಿದರು. ಅವರು ಕೂಟದಲ್ಲಿ ಸತತ 7ನೇ ಬಾರಿ ಮತ್ತು ಒಟ್ಟಾರೆ 10ನೇ ಬಾರಿ ಪ್ರಶಸ್ತಿ ಜಯಿಸಿದರು. ಪಂಕಜ್​ಗೆ ಬಿಲಿಯರ್ಡ್ಸ್​ನಲ್ಲಿ ಇದು ಒಟ್ಟಾರೆ 20ನೇ ವಿಶ್ವ ಕಿರೀಟವಾಗಿದೆ. ಅವರು ಸ್ನೂಕರ್​ನಲ್ಲೂ 8 ವಿಶ್ವ ಕಿರೀಟ ಗೆದ್ದುಕೊಂಡಿದ್ದಾರೆ.

ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ 39 ವರ್ಷದ ಪಂಕಜ್​ ಆರಂಭಿಕ ಹಿನ್ನಡೆ ಅನುಭವಿಸಿದರು. ಆದರೆ ನಂತರ ಮೇಲುಗೈ ಸಾಧಿಸಿ ಮೊದಲಿಗರಾಗಿ 150 ಅಂಕಗಳ ತಲುಪಿದರು. ನಂತರ 2 ಮತ್ತು 3ನೇ ಫ್ರೇಮ್​ನಲ್ಲೂ ಪಂಕಜ್​ ಗೆಲುವು ಸಾಧಿಸಿದರು. ಆದರೆ 4 ಮತ್ತು 5ನೇ ಫ್ರೇಮ್​ನಲ್ಲಿ ಹಾಲ್​ ತಿರುಗೇಟು ನೀಡಿದರು. ಆದರೆ 6ನೇ ಫ್ರೇಮ್​ನಲ್ಲಿ ಪಂಕಜ್​ ಮತ್ತೆ ಲಯ ಕಂಡುಕೊಂಡರು. ಒಟ್ಟಾರೆಯಾಗಿ 151-94, 151-0, 150-84, 74-151, 6-154, 152-46 ಅಂತರದಿಂದ ಪಂಕಜ್​ ಗೆಲುವು ಸಾಧಿಸಿದರು.

"ವಿಶ್ವ ಬಿಲಿಯರ್ಡ್ಸ್​ನಲ್ಲಿ ಗೆಲುವಿನ ಲಯ ಕಾಯ್ದುಕೊಂಡಿರುವುದು ಅಮೋ ಅನುಭವ ನೀಡಿದೆ. ಇದು ಸುಲಭವಾಗಿರಲಿಲ್ಲ. ಸ್ಪರ್ಧೆ ಕಠಿಣವಾಗಿತ್ತು. ನಾನು ಉತ್ತಮ ಲಯದಲ್ಲಿ ಇರದಿದ್ದಾಗ ಕ್ರೀಡಾ ಮನೋಶಾಸ್ತ್ರಜ್ಞನಾಗಿರುವ ನನ್ನ ಸಹೋದರ ಶ್ರೀ ನೆರವಿಗೆ ಬರುತ್ತಾರೆ. ಈ ಗೆಲುವು ನನ್ನ ದೇಶ ಮತ್ತು ಕುಟುಂಬಕ್ಕೆ ಅರ್ಪಣೆ' ಎಂದು ಪಂಕಜ್​ ಗೆಲುವಿನ ಬಳಿಕ ಹೇಳಿದರು.

ಪಂಕಜ್​ ಟೂರ್ನಿಯಲ್ಲಿ 2016ರಿಂದ ಸತತವಾಗಿ ಪ್ರಶಸ್ತಿ ಗೆಲ್ಲುತ್ತ ಬಂದಿದ್ದಾರೆ. ಕರೊನಾದಿಂದಾಗಿ 2020, 2021ರಲ್ಲಿ ಈ ಟೂರ್ನಿ ನಡೆದಿರಲಿಲ್ಲ.

ಪಂಕಜ್​ 28 ವಿಶ್ವ ಪ್ರಶಸ್ತಿಗಳು

*ವಿಶ್ವ ಬಿಲಿಯರ್ಡ್ಸ್​ (ಅಂಕ ಮಾದರಿ): 10 (2005, 2008, 2014, 2016, 2017, 2018, 2019, 2022, 2023, 2024)

*ವಿಶ್ವ ಬಿಲಿಯರ್ಡ್ಸ್​ (ದೀರ್ಘ ಮಾದರಿ): 9 (2005, 2007, 2008, 2009, 2012, 2014, 2015, 2018, 2023)

*ವಿಶ್ವ ತಂಡ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​: 1 (2014)

*ವಿಶ್ವ ಸ್ನೂಕರ್​ ಚಾಂಪಿಯನ್​ಷಿಪ್​: 3 (2003, 2015, 2017)

*ವಿಶ್ವ 6-ರೆಡ್​ ಸ್ನೂಕರ್​: 3 (2015, 2014, 2021)

*ವಿಶ್ವ ಸ್ನೂಕರ್​ ತಂಡ ಚಾಂಪಿಯನ್​ಷಿಪ್​: 2 (2018, 2019)