ಕ್ರೀಡೆ

ಪಾನಿಪುರಿ ಮಾರುತ್ತಿದ್ದ ಹುಡುಗ ಈಗ ಟೀಮ್​ ಇಂಡಿಯಾದ ಸೆಂಚುರಿ ವೀರ!

ಡೊಮಿನಿಕಾ: ಕ್ರಿಕೆಟ್​ ಆಡುವ ಕನಸು ಹೊತ್ತು ಉತ್ತರ ಪ್ರದೇಶದಿಂದ ಮುಂಬೈಗೆ 10ನೇ ವಯಸ್ಸಿನಲ್ಲೇ ವಲಸೆ ಹೋಗಿದ್ದ ಯಶಸ್ವಿ ಜೈಸ್ವಾಲ್​ ಈಗ ಟೀಮ್​ ಇಂಡಿಯಾ ಪರ ಪದಾರ್ಪಣೆಯ ಟೆಸ್ಟ್​ನಲ್ಲೇ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಮುಂಬೈಗೆ ವಲಸೆ ಹೋದ ಆರಂಭದ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಕ್ರಿಕೆಟ್​ ಮೈದಾನದ ಬಳಿಯೇ ಪಾನಿಪುರಿ ಮಾರಾಟ ಮಾಡಿದ್ದ ಜೈಸ್ವಾಲ್​ ಇಂದು ಸೆಂಚುರಿ ವೀರರಾಗಿದ್ದಾರೆ.

ಪದಾರ್ಪಣೆಯ ಟೆಸ್ಟ್​ನಲ್ಲೇ ಶತಕ ಬಾರಿಸಿ ಮಿಂಚಿದ 21 ವರ್ಷದ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಹಲವು ದಾಖಲೆಗಳನ್ನು ಬರೆದರು. ಚೊಚ್ಚಲ ಟೆಸ್ಟ್​ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜೈಸ್ವಾಲ್​, ಪದಾರ್ಪಣೆಯ ಟೆಸ್ಟ್​ನಲ್ಲಿ 150 ಪ್ಲಸ್​ ರನ್​ ಗಳಿಸಿದ 3ನೇ ಭಾರತೀಯ ಎನಿಸಿದರು. ಅಲ್ಲದೆ ಚೊಚ್ಚಲ ಟೆಸ್ಟ್​ನಲ್ಲಿ 3ನೇ ಗರಿಷ್ಠ ರನ್​ ಸಾಧಕರಾಗಿದ್ದಾರೆ. ಶಿಖರ್​ ಧವನ್​ (187), ರೋಹಿತ್​ ಶರ್ಮ (177) ಮೊದಲೆರಡು ಸ್ಥಾನದಲ್ಲಿದ್ದಾರೆ. ಪದಾರ್ಪಣೆಯ ಟೆಸ್ಟ್​ನಲ್ಲಿ ಗರಿಷ್ಠ ಎಸೆತ (387) ಎದುರಿಸಿದ ಭಾರತೀಯರೆಂಬ ಸಾಧನೆಯೂ ಜೈಸ್ವಾಲ್​ ಅವರದಾಗಿದೆ. ಮೊಹಮದ್​ ಅಜರುದ್ದೀನ್​ 322 ಎಸೆತ ಆಡಿದ್ದು ಹಿಂದಿನ ದಾಖಲೆ. ಅಲ್ಲದೆ, ಪದಾರ್ಪಣೆ ಟೆಸ್ಟ್​ನಲ್ಲಿ 350 ಪ್ಲಸ್​ ಎಸೆತ ಎದುರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಪದಾರ್ಪಣೆಯ ಟೆಸ್ಟ್​ನಲ್ಲಿ ಶತಕ ಸಿಡಿಸಿದ 3ನೇ ಭಾರತೀಯ ಆರಂಭಿಕ ಎಂಬ ಹೆಗ್ಗಳಿಕೆಯೂ ಜೈಸ್ವಾಲ್​ ಅವರದಾಗಿದೆ. ಧವನ್​, ಪೃಥ್ವಿ ಷಾ ಮೊದಲಿಬ್ಬರು.

ಭರವಸೆಯ ಎಡಗೈ ಬ್ಯಾಟ್ಸ್​ಮನ್​ ಆಗಿರುವ ಜೈಸ್ವಾಲ್​, ಬಾಲ್ಯದಲ್ಲಿ ತಾನಿದ್ದ ಹಳ್ಳಿಯಲ್ಲಿ ಸೂಕ್ತ ಅವಕಾಶ ಸಿಗುವುದಿಲ್ಲ ಮತ್ತು ಕ್ರಿಕೆಟ್​ ತಾರೆಯಾಗಬೇಕಿದ್ದರೆ ಮುಂಬೈಗೆ ಹೋಗಬೇಕು ಎಂಬ ಸಹಪಾಠಿಗಳ ಮಾತು ಕೇಳಿ, ಮನೆಬಿಟ್ಟು ಬರಿಗೈಯಲ್ಲೇ ಮುಂಬೈಗೆ ಓಡಿ ಹೋಗಿದ್ದರು. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಕ್ರಿಕೆಟ್​ ಮೈದಾನದ ಬಳಿಯೇ ಪಾನಿಪುರಿ ಮಾರಬೇಕಾಗಿ ಬಂದಿತು. ಇದರಿಂದ ಧೃತಿಗೆಡದ ಯಶಸ್ವಿ ಪ್ರತಿಷ್ಠಿತ ಆಜಾದ್​ ಮೈದಾನದಲ್ಲೇ ಗ್ರೌಂಡ್​ಮನ್​ಗಳು ಕಟ್ಟಿದ ಟೆಂಟ್​ನಲ್ಲೇ ಉಳಿದುಕೊಂಡಿದ್ದರು. ದಿಗ್ಗಜ ಸಚಿನ್​ ತೆಂಡುಲ್ಕರ್​ ಆಡಿ ಬೆಳೆದ ಈ ಮೈದಾನ ಯಶಸ್ವಿಯ ಕೈಯನ್ನೂ ಹಿಡಿದೆತ್ತಿತು.

3 ತಿಂಗಳ ಕಾಲ ಟೆಂಟ್​ನಲ್ಲೇ ಬದುಕಿದ ಬಳಿಕ 2013ರಲ್ಲಿ ಸಂತಕ್ರೋಜ್​ನ ಕ್ರಿಕೆಟ್​ ಅಕಾಡೆಮಿಯೊಂದರ ಕೋಚ್​ ಜ್ವಾಲಾ ಸಿಂಗ್​ ಕಣ್ಣಿಗೆ ಬಿದ್ದ ಯಶಸ್ವಿಗೆ ಅವರೇ ಸೂಕ್ತ ಆಶ್ರಯ ಒದಗಿಸಿದರು. ಮೊದಲಿಗೆ ಮುಂಬೈನ 16 ವಯೋಮಿತಿ ತಂಡದಲ್ಲಿ ಸ್ಥಾನ ಸಂಪಾದಿಸಿದ ಯಶಸ್ವಿ ಬಳಿಕ 19 ವಯೋಮಿತಿ ಭಾರತ ತಂಡದ ಪರ ಆಡಿದರು. 2018ರಲ್ಲಿ ನಡೆದ 19 ವಯೋಮಿತಿ ವಿಶ್ವಕಪ್​ನಲ್ಲಿ ಸರ್ವಾಧಿಕ ಸಿಡಿಸಿದ ಸಾಧನೆ ಮಾಡಿದ ಯಶಸ್ವಿ, ಪಾಕಿಸ್ತಾನ ವಿರುದ್ಧದ ಸೆಮಿೈನಲ್​ನಲ್ಲಿ ಶತಕವನ್ನೂ ಸಿಡಿಸಿ ಮಿಂಚಿದ್ದರು. ನಂತರ ವಿಜಯ್​ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ದೇಶೀಯ ಕ್ರಿಕೆಟ್​ನಲ್ಲೂ ಯಶಸ್ವಿ ಆರಂಭ ಕಂಡ ಅವರು, ಲಿಸ್ಟ್​ ಎ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಕಿರಿಯ ಕ್ರಿಕೆಟಿಗರೆನಿಸಿದ್ದಾರೆ.

ಕಳೆದೆರಡು ಐಪಿಎಲ್​ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್​ ಪರ ರನ್​ ಪ್ರವಾಹ ಹರಿಸಿರುವ ಜೈಸ್ವಾಲ್​, ಐಪಿಎಲ್​ ಟೂರ್ನಿ ವೇಳೆ ಹಿರಿಯ ಕ್ರಿಕೆಟಿಗ ಎಂಎಸ್​ ಧೋನಿಗೆ ನಮಸ್ತೇ ಮಾಡಿದ ಚಿತ್ರವೊಂದು ಈ ಹಿಂದೆ ವೈರಲ್​ ಆಗಿತ್ತು. 21 ವರ್ಷ, 196 ದಿನ ವಯಸ್ಸಿನ ಯಶಸ್ವಿ ಜೈಸ್ವಾಲ್​ ಪದಾರ್ಪಣೆ ಟೆಸ್ಟ್​ನಲ್ಲಿ ಶತಕ ಸಿಡಿಸಿದ 4ನೇ ಕಿರಿಯ ಭಾರತೀಯ ಬ್ಯಾಟರ್​ ಎನಿಸಿದ್ದಾರೆ. ಪೃಥ್ವಿ ಷಾ (18 ವರ್ಷ, 329 ದಿನ), ಅಬ್ಬಾಸ್​ ಅಲಿ (20 ವರ್ಷ, 126 ದಿನ), ಜಿಆರ್​ ವಿಶ್ವನಾಥ್​ (20 ವರ್ಷ, 276 ದಿನ) ಮೊದಲ ಮೂವರು ಸಾಧಕರು. ಯಶಸ್ವಿ ಜೈಸ್ವಾಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ 150 ಪ್ಲಸ್​ ರನ್​ ಗಳಿಸಿದ 2ನೇ ಕಿರಿಯ ಭಾರತೀಯ ಬ್ಯಾಟರ್​ ಎನಿಸಿದ್ದಾರೆ. ಮಾಧವ್​ ಆಪ್ಟೆ (20 ವರ್ಷ, 137 ದಿನ) ಅತಿ ಕಿರಿಯರಾಗಿದ್ದಾರೆ.