ಕೊಲಂಬೋ: ವಿರಾಟ್ ಕೊಹ್ಲಿ ಹೆಸರು ಹೇಳುತ್ತಿರುವ ಅಭಿಮಾನಿಗಳತ್ತ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭಿರ್ ಮಧ್ಯದ ಬೆರಳನ್ನು ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ವೈರಲ್ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಗೌತಮ್ ಗಂಭೀರ್ ನಾನು ಹಾಗೆ ಮಾಡಿದ್ದು, ಕೊಹ್ಲಿ ಅಭಿಮಾನಿಗಳಿಗಲ್ಲ. ಗುಂಪಿನಲ್ಲಿದ್ದ ಕೆಲವರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದರು ಅವರಿಗೆ ಹಾಗೆ ತೋರಿಸಿದ್ದೇನೆ ಎಂದು ವಿವರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಲ್ಲಿ ನಿಜವಾಗಿಯೂ ಏನಾಯಿತು ಎಂದರೆ ಭಾರತ ವಿರೋಧಿ ಘೋಷಣೆಗಳನ್ನು ಗುಂಪೊಂದು ಕೂಗುತ್ತಿತ್ತು. ಹಿಂದುಸ್ತಾನ್ ಮುರ್ದಾಬಾದ್ ಎಂದು ಕೂಗುತ್ತಿದ್ದರು ಇದನ್ನು ಕೇಳಿದ ತಕ್ಷಣ ನಾನು ಅವರಿಗೆ ಆ ರೀತಿ ಪ್ರತಿಕ್ರಿಯಿಸಿದೆ.
ಕೆಲವು ವ್ಯಕ್ತಿಗಳು ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ ನಾವು ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ನೀವು ಪಂದ್ಯವನ್ನು ವೀಕ್ಷಿಸಲು ಬಂದಾಗ ನಿಮ್ಮ ತಂಡವನ್ನು ಬೆಂಬಲಿಸಿ ಅದು ಬಿಟ್ಟು ರಾಜಕೀಯ ಮಾಡಲು ಬರಬೇಡಿ. ನಾನು ಈ ವಿಷಯವನ್ನು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳಿಗೆ ಹೇಳುತ್ತಿದ್ದೇನೆ. ಆಟವನ್ನು ಆನಂದಿಸಿ ಅದು ಬಿಟ್ಟು ರಾಜಕೀಯ ಮಾಡಬೇಡಿ ಎಂದಿದ್ದಾರೆ.
ಪಂದ್ಯ ನಡುವೆ ಮಧ್ಯದ ಬೆರಳು ತೋರಿದ್ದಕ್ಕಾಗಿ ಗಂಭೀರ್ ನಡೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.