ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ. ಈಗಾಗಲೇ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಸದ್ದು ಮಾಡಿದೆ. ಇದೀಗ ಭಾರತ ಎದುರು ಗೆಲುವಿನ ಆಸೆ ಹೊತ್ತಿರುವ ಜಿಂಬಾಬ್ವೆಗೆ ಪಾಕ್ ನಟಿಯೊಬ್ಬಳು ಬಂಪರ್ ಆಫರ್ ನೀಡಿದ್ದಾರೆ.
ಅಂದಹಾಗೆ ಪಾಕ್, ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಹೀನಾಯ ಸೋಲಿನ ಹತಾಶೆಯಲ್ಲಿದೆ. ಪಾಕ್ ಕ್ರೀಡಾಭಿಮಾನಿಗಳಿಗೂ ಸಹ ಈ ಎರಡೂ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋತಿದ್ದು, ಪಾಕ್ಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಭಾರತದ ಸೋಲನ್ನು ಪಾಕ್ ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್ ನಟಿ ಸೆಹಾರ್ ಶಿನ್ವಾರಿ ಎಂಬಾಕೆ ಜಿಂಬಾಬ್ವೆಗೆ ಆಫರ್ ಒಂದನ್ನು ನೀಡಿದ್ದಾರೆ.
ಆ ಆಫರ್ ಏನು ಅಂದರೆ, ಭಾನುವಾರ (ನ.6) ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಜಿಂಬಾಬ್ವೆ ಸೋಲಿಸಿದ್ದಲ್ಲಿ, ಜಿಂಬಾಬ್ವೆ ಮೂಲದ ಯುವಕನನ್ನು ಪಾಕ್ ನಟಿ ಮದುವೆ ಆಗಲಿದ್ದಾರಂತೆ.
ಇದೀಗ ನಟಿಯ ಟ್ವೀಟ್ ವೈರಲ್ ಆಗುತ್ತಿದೆ. ಜಿಂಬಾಬ್ವೆ ಗೆಲ್ಲಲಿ ಎಂದು ಪಾಕ್ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದರೆ, ಇದೆಲ್ಲ ತಿರುಕನ ಕನಸು ಅಂತಾ ಭಾರತೀಯ ಕ್ರೀಡಾಭಿಮಾನಿಗಳು ನಟಿಯ ಟ್ವೀಟ್ ಅನ್ನು ಗೇಲಿ ಮಾಡಿದ್ದಾರೆ. ಮೊನ್ನೆ (ನ.2) ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲೂ ಪಾಕಿಗಳು ಭಾರತದ ಸೋಲಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ವರುಣ ಭಾರತದ ಮೇಲೆ ಕೃಪೆ ತೋರಿಸಿ, ಪಂದ್ಯದ ದಿಕ್ಕನ್ನೇ ಬದಲಿಸಿತು.
ಅಂದಹಾಗೆ ಜಿಂಬಾಬ್ವೆ ವಿರುದ್ಧ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. (ಏಜೆನ್ಸೀಸ್)