India : ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಇಡೀ ಜಗತ್ತೇ ಕಾದಿರುವ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ 2.30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ನೀಡಿರುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ವಾಸನ್ ಹೇಳಿದ್ದೇನೆಂದರೆ, ಪಾಕಿಸ್ತಾನ ಗೆಲ್ಲಬೇಕಂತೆ!
ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ 60 ರನ್‌ಗಳಿಂದ ಸೋತ ನಂತರ ಪಾಕಿಸ್ತಾನ ಎರಡನೇ ಪಂದ್ಯವನ್ನು ಇಂದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಆಡಲಿದೆ. ಮತ್ತೊಂದೆಡೆ, ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಇಂದಿನ ಪಂದ್ಯಕ್ಕೆ ಉತ್ಸಾಹದಿಂದಲೇ ಪ್ರವೇಶಿಸಿದೆ. ಕಳಪೆ ಫಾರ್ಮ್‌ನೊಂದಿಗೆ ಈ ಮೆಗಾ ಟೂರ್ನಮೆಂಟ್ ಆರಂಭಿಸಿದ ಪಾಕಿಸ್ತಾನ, ಬಲಿಷ್ಠ ಭಾರತವನ್ನು ಹೇಗೆ ಎದುರಿಸಲಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಅತುಲ್ ವಾಸನ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ.
ಪಾಕಿಸ್ತಾನ ಗೆಲ್ಲಬೇಕೆಂಬುದು ನನ್ನ ಆಸೆ. ಗೆದ್ದರೆ ಮಾತ್ರ ಈ ಟೂರ್ನಮೆಂಟ್ ಇನ್ನಷ್ಟು ಉತ್ಸಾಹಭರಿತವಾಗಿರುತ್ತದೆ. ಒಂದು ವೇಳೆ ಪಾಕಿಸ್ತಾನ ಸೋತು ಹೊರಬಿದ್ದರೆ, ಈ ಟೂರ್ನಮೆಂಟ್ನಲ್ಲಿ ಸ್ಪರ್ಧೆಗೆ ಇನ್ನೇನು ಉಳಿಯುತ್ತದೆ? ಎಂದು ಅತುಲ್ ವಾಸನ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದೀಗ ಅವರ ಹೇಳಿಕೆಗೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಐದು ಸ್ಪಿನ್ನರ್‌ಗಳನ್ನು ಸೇರಿಸಿಕೊಳ್ಳುವ ಭಾರತದ ನಿರ್ಧಾರವನ್ನು ಅತುಲ್ ವಾಸನ್ ಶ್ಲಾಘಿಸಿದರು. ಭಾರತ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು, ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡಬಲ್ಲದು ಎಂದು ಅತುಲ್ ವಾಸನ್ ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಪಂದ್ಯದ ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಿದ್ದರೂ ಭದ್ರತಾ ದೃಷ್ಟಿಯಿಂದ ಭಾರತ ಪಾಕ್ಗೆ ಪ್ರಯಾಣಿಸಿಲ್ಲ. ತಲ್ಲ ಎಲ್ಲ ಪಂದ್ಯಗಳನ್ನು ಭಾರತ ದುಬೈನಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ದುಬೈನಲ್ಲಿದ್ದು, ಆತಿಥೇಯ ರಾಷ್ಟ್ರವಾಗಿದ್ದರೂ ಪಾಕಿಸ್ತಾನ ದುಬೈಗೆ ಪ್ರಯಾಣ ಬೆಳೆಸಿದೆ. (ಏಜೆನ್ಸೀಸ್)