ಕ್ರೀಡೆ

ದಿಗ್ಗಜರ ನಡುವೆ ಜಿದ್ದಿನ ಜ್ವಾಲೆ! ಪಾಕಿಸ್ತಾನ ಕ್ರಿಕೆಟ್​ನಲ್ಲಿ ಯಾವುದೂ ಸರಿಯಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ | Pakistan

Pakistan Cricket: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ಪಾಕಿಸ್ತಾನ ತಂಡ, ಭಾರತ ಎದುರು 6 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತು. ಆ ಪಂದ್ಯದ ನಂತರದಲ್ಲಿ ಟೂರ್ನಿಯಿಂದಲೇ ಹೊರಬಿದ್ದ ತಂಡಕ್ಕೆ ಪಾಕ್​ ಮಾಜಿ ಹಿರಿಯ ಕ್ರಿಕೆಟಿಗರಾದ ವಾಖರ್ ಯೂನಿಸ್​, ವಾಸಿಮ್​ ಅಕ್ರಂ, ಶೋಯಿಬ್​ ಅಖ್ತರ್​ರಿಂದ ವ್ಯಾಪಕ ಟೀಕೆ, ಛೀಮಾರಿ ವ್ಯಕ್ತವಾಗಿತ್ತು. ಇದಕ್ಕೆ ಕಿಡಿಕಾರಿದ್ದ ಮೊಹಮ್ಮದ್​ ಹಫೀಜ್​, ದಿಗ್ಗಜ ಕ್ರಿಕೆಟಿಗರಿಗೆ ಮುಖಕ್ಕೆ ಹೊಡೆದಂತೆ ಒಂದಷ್ಟು ಮಾತುಗಳನ್ನಾಡಿದ್ದರು. ಅಂದಿನಿಂದ ಈ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಪಾಕ್​ ಕ್ರಿಕೆಟ್​ನಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಹಫೀಜ್​ ನೀಡಿದ್ದ ಹೇಳಿಕೆಯೇನು?

ಮೊಹಮ್ಮದ್​ ರಿಜ್ವಾನ್​ ನೇತೃತ್ವದ ತಂಡವನ್ನು ಟೀಕಿಸಿದ 90ರ ದಶಕದ ಸ್ಟಾರ್​ ಕ್ರಿಕೆಟಿಗರಿಗೆ ತಿರುಗೇಟು ನೀಡಿದ್ದ ಹಫೀಜ್​, "ದಿಗ್ಗಜರು ಎನ್ನಿಸಿಕೊಂಡ ವಾಖರ್ ಯೂನಿಸ್​, ಶೋಯಿಬ್​ ಅಖ್ತರ್​, ಇಂಜಮಾಮ್​ ಉಲ್​-ಹಕ್​, ವಾಸಿಮ್​ ಅಕ್ರಂ ಅವರೆಲ್ಲ ಅಂದು ಪಾಕಿಸ್ತಾನ ಕ್ರಿಕೆಟ್​ಗೆ ಏನು ಕೊಡುಗೆ ನೀಡಿದ್ದಾರೆ? ಎಷ್ಟು ಟ್ರೋಫಿ ತಂದುಕೊಟ್ಟಿದ್ದಾರೆ? ಹಿರಿಯ ಸ್ಥಾನದಲ್ಲಿದ್ದು, ಯುವ ಕ್ರಿಕೆಟಿಗರ ತಂಡವನ್ನು ಟೀಕಿಸುವುದು ಸರಿಯಲ್ಲ" ಎಂದಿದ್ದರು.

ಹಫೀಜ್​ ಹೇಳಿಕೆಗೆ ದಿಗ್ಗಜರು ಕಿಡಿ

ಹಫೀಜ್​ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಸಮರ್ಥನೆ ಕೊಟ್ಟ ವಾಸಿಮ್​ ಅಕ್ರಂ, ವಾಖರ್ ಯೂನಿಸ್​, ಮಾಜಿ ಕ್ರಿಕೆಟಿಗನ ಹೇಳಿಕೆಗೆ ಕೆಂಡಾಮಂಡಲಗೊಂಡರು. ಅಂದಿನಿಂದಲೂ ಹಫೀಜ್​ ವಿರುದ್ಧ ದಿಗ್ಗಜರು ತೀವ್ರ ಅಸಮಾಧಾನ ಹೊಂದಿದ್ದಾರೆ. ಈಗ ಇದೇ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, 'ರಾವಲ್​ಪಿಂಡಿ ಎಕ್ಸ್​ಪ್ರೆಸ್'​ ಹಫೀಜ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀನು ಮಾಡಿದ್ದೇನು ಏನು?

ಹಫೀಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಫೀಜ್​, “ವಾಸಿಮ್ ಅಕ್ರಮ್ ಮತ್ತು ವಾಖರ್​ ಯೂನಿಸ್ ನನ್ನ ಕಣ್ಣೆದುರೇ ಹಲವು ಸರಣಿಗಳನ್ನು ಗೆದ್ದಿದ್ದಾರೆ. ಒಟ್ಟಿಗೆ ಅವರು ಕನಿಷ್ಠ 60 ಏಕದಿನ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಇಷ್ಟಾದರೂ ಆತ (ಹಫೀಜ್) ನೀವು ಯಾವುದೇ ರೀತಿಯಲ್ಲೂ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿಲ್ಲ. ನೆನಪಿಸಿಕೊಳ್ಳುವಂತ ಕೊಡುಗೆ ನೀಡಿಲ್ಲ ಎಂದು ಹೇಳುತ್ತಿದ್ದಾನೆ. ಅಷ್ಟಕ್ಕೂ ದಿಗ್ಗಜರ ಕೊಡುಗೆ ಇಲ್ಲ ಎನ್ನುವುದಾದರೆ ಇವರ ಕೊಡುಗೆ ಏನು?" ಎಂದು ಪ್ರಶ್ನಿಸಿದ್ದಾರೆ. ಈ ಮಾತಿನ ಸಮರ ಮುಂದೆ ಎಲ್ಲೆಲ್ಲಿ ಪಿಸಿಬಿಗೆ ತೊಂದರೆ ತಂದಿಡಲಿದೆ ಎಂಬುದೇ ಪ್ರಶ್ನೆ,(ಏಜೆನ್ಸೀಸ್).